Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದು, ಎಲ್ಕ ಸಮಾಜದ ಮುಖಂಡರು ಹಾಗೂ ಸರ್ವಪಕ್ಷದ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಈಶ್ವರಪ್ಪ, ಹಿಂದುಳಿದವರಿಗೆ, ದಲಿತರಿಗೆ, ಬಡವರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಒಂದು ಪ್ರಬಲ ಸಂಘಟನೆ ಆಗಬೇಕು. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಸಭೆ ನಡೆಸುತ್ತಿದ್ದೇವೆ. ಬ್ರಾಹ್ಮಣ ,ಲಿಂಗಾಯತರು, ದಲಿತರು, ಹಿಂದೂಳಿದ ವರ್ಗದವರು ಸೇರಿದಂತೆ ಎಲ್ಲಾ ಸಮುದಾಯದ ನಾಯಕರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಪಕ್ಷಾತೀತವಾಗಿ ಈ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು.
ಅಕ್ಟೋಬರ್ 20 ರಂದು ಬೆಳಗ್ಗೆ 11 ಗಂಟೆ ಬಾಗಲಕೋಟೆಯಲ್ಲಿ ಮತ್ತೊಂದು ಸಭೆ ನಡೆಸಲಿದ್ದೇವೆ. ಇದರಲ್ಲಿ 35 ಜನ ಸ್ವಾಮೀಜಿಗಳು, ವಿವಿಧ ಸಮುದಾಯದ ಮುಖಂಡರು ಭಾಗಿಯಾಗಲಿದ್ದಾರೆ. ಆರ್ ಸಿಬಿ ಸಂಘಟನೆ ಬಗ್ಗೆ ಬಾಗಲಕೋಟೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಚೆನ್ನಮ್ಮ ಮತ್ತು ರಾಯಣ್ಣರನ್ನು ಜ್ಯಾತಿಗೆ ಸೀಮಿತ ಮಾಡುವುದು ಸರಿಯಲ್ಲ. ಸಾಧು ಸಂತರು ನಮಗೆ ಸಲಹೆ ನೀಡಿದ್ದಾರೆ. ಆ ಸಲಹೆಗೆ ನಾವು ಒಪ್ಪಿಗೆ ನೀಡಿದ್ದೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಇದೇ ಅಕ್ಟೋಬರ್ 20 ರಂದು ಬಾಗಲಕೋಟೆಯಲ್ಲಿ ಸಭೆ ನಡೆಸಲು ನಿರ್ಧಾರ ಮಾಡಿರುವ ಕುರಿತು ತಿಳಿಸಿದ್ದಾರೆ. ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಬೃಹತ್ ಸಭೆ ನಡೆಸಲು ಸಾಧು ಸಂತರು ತೀರ್ಮಾನ ತೆಗೆದುಕೊಂಡಿದ್ದಾರೆ. ಸಂಘಟನಾತ್ಮಕವಾಗಿ ಮುಂದಿನರೂಪುರೇಷೆಗಳ ಕುರಿತು ಚರ್ಚೆ ಮಾಡಲು ನಿರ್ಧರಿಸಲಾಗಿದೆ. ಹಿಂದುಳಿದವರಿಗೆ, ಬಡವರಿಗೆ ಶೋಷಿತ ವರ್ಗದವರಿಗೆ ಅನ್ಯಾಯ ಆಗುತ್ತಿದೆ. ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಒಗ್ಗಟ್ಟಿನ ಮಂತ್ರ ಜಪಿಸಲಿದ್ದೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಯತ್ನಾಳ್ ಅವರೂ ನಮ್ಮ ಜೊತೆ ಬರ್ತಾರೆ. ಸಾಧು ಸಂತರ ನೇತೃತ್ವದಲ್ಲಿ ಬ್ರಿಗೇಡ್ ಚಟುವಟಿಕೆ ನಡೆಯುತ್ತೆ. ಇದಕ್ಕೂ ರಾಜಕೀಯ ಪಕ್ಷಕ್ಕೂ ಸಂಬಂಧವಿಲ್ಲ. ಎಲ್ಲ ಪಕ್ಷದವರಿಗೂ ಆಹ್ವಾನ ನೀಡ್ತೇವೆ. ಯಾವುದೇ ಪಕ್ಷದವರು ಬಂದ್ರೂ ಸೇರಿಸಿಕೊಳ್ತೇವೆ. ಒಂದು ಕಾಲದಲ್ಲಿ ಸಿದ್ಧಾಂತದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು. ಸಿದ್ದರಾಮಯ್ಯ, ಯಡಿಯೂರಪ್ಪ ಮೊದಲಾದವರು ಯಾವ ರೀತಿಯ ಪದ ಬಳಸ್ತಿದಾರೆ. ಇಡೀ ದೇಶ ನಿಮ್ಮನ್ನು ನೋಡ್ತಾ ಇದೆ. ರಾಜ್ಯದಲ್ಲಿ ದ್ವೇಷದ ರಾಜಕಾರಣ ನಡೀತಿದೆ. ನನ್ನ ಸ್ವಾರ್ಥಕ್ಕೆ ಸಂಘಟನೆ ಬಳಸಿಕೊಳ್ಳಲ್ಲ. ಸಾಯೋವರೆಗೂ ಬಿಜೆಪಿಯಲ್ಲಿ ಇರ್ತೇವೆ ಅಂತ ಹೇಳುತ್ತಿದ್ದೆವು. ಆದ್ರೆ ಅಲ್ಲಿನ ಪರಿಸ್ಥಿತಿ ಹೇಗಿದೆ..? ಶುದ್ಧಿಕರಣಕ್ಕೆ ಗಂಗಾ ಜಲ ತರೋ ವಿಚಾರ ಯತ್ನಾಳ್ ಅವರಿಗೆ ಗೊತ್ತು ನೀವು ಅವರನ್ನೇ ಕೇಳಿ. ನಾನಾಗಲಿ, ನನ್ನ ಮಗನಾಗಲಿ ಚುನಾವಣೆಗೆ ನಿಲ್ಲಲ್ಲ. ವಿಜಯೇಂದ್ರ ಇನ್ನೂ ಎಳಸು. ಅವರಿಂದ ಕಲಿಯಬೇಕಾದ್ದು ಏನೂ ಇಲ್ಲ ಎಂದು ವಿಜಯೇಂದ್ರ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಠೇವಣಿ ಕಳೆದುಕೊಂಡವರು ಸಂಘಟನೆ ಕಟ್ಟುತ್ತಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಕಿಡಿ ಕಾರಿದ ಈಶ್ವರಪ್ಪ, ನಾವು ಸೈಕಲ್ ಹತ್ತಿ ಪಕ್ಷ ಕಟ್ಟುವಾಗ ವಿಜಯೇಂದ್ರ ಇನ್ನೂ ಕಣ್ಣು ಬಿಟ್ಟಿರಲಿಲ್ಲ. ರಾಜಕೀಯವಾಗಿ ವಿಜಯೇಂದ್ರ ಇನ್ನೂ ಎಳಸು. ಯಾರೂ ಏನೂ ಮಾಡೋಕೆ ಆಗಲ್ಲ ಅಂತ ಕುಳಿತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ 37 ಜನ ಇವರ ಬಗ್ಗೆ ದೂರು ಕೊಟ್ಟರು. ಸಭೆ ನಡೆದ ನಂತರ ಪಕ್ಷ ಕಟ್ಟಿದವರ ಬಗ್ಗೆ ಲೇವಡಿ ಮಾಡಿದರು. ತನಗೆ ಬೇಕಾದವರಿಗೆ ಸೀಟು, ನನಗೆ ಬೇಕಾದವರಿಗೆ ಪದಾಧಿಕಾರಿ ಹುದ್ದೆ. ಹೈಕಮಾಂಡ್ ಗೆ ಮಂಕು ಬೂದಿ ಎರಚಿದ್ದಾರೆ. ಮಂಕು ಬೂದಿ ಎರಚಿ ರಾಜ್ಯಾಧ್ಯಕ್ಷ ಸ್ಥಾನ ಪಡೆದಿದ್ದಾರೆ. ಹೈಕಮಾಂಡ್ ಗೆ ಇದೆಲ್ಲ ಗೊತ್ತಿದ್ದರೂ ಏನು ಮಾಡ್ತಿಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಜಾತಿ ಗಣತಿ ಬಹಿರಂಗದ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸಿಎಂ ಹುದ್ದೆ ಉಳಿಸಿಕೊಳ್ಳಲು ಸಿದ್ದರಾಮಯ್ಯ ಜಾತಿ ಜನಗಣತಿ ಅಡ್ಡ ತಂದಿದ್ದಾರೆ. ಅಧಿವೇಶನದಲ್ಲಿಯೇ ನಾವು ಪಕ್ಷಾತೀತವಾಗಿ ನಿಳುವಳಿ ಸೂಚನೆ ಮಾಡಿದ್ದೆವು. ಮಂಡನೆ ಮಾಡೇ ಮಾಡ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ರು. ಈಗ ಡೈವರ್ಟ್ ಮಾಡೋಕೆ ಜಾತಿ ಜನಗಣತಿ ಅಡ್ಡ ತಂದಿದ್ದಾರೆ. ಚಾಮುಂಡಿ ಸಿದ್ದರಾಮಯ್ಯ ಗೆ ಬುದ್ಧಿ ಕೊಟ್ಟಿದ್ದಾಳೆ. ಇನ್ನೂ ವರದಿಯೇ ಬಂದಿಲ್ಲ. ಮುಂಚೆ ಹೇಳಿದಂತೆ ನಡೆದುಕೊಳ್ಳಿ. ವಿಧಾನ ಮಂಡಲದಲ್ಲಿ ಮಂಡಿಸಿ ನಂತರ ಅದರ ಅಂಗೀಕಾರ ಮಾಡಿ. ಜಾತಿ ಜನಗಣತಿ ಅಡ್ಡ ಇಟ್ಟುಕೊಂಡು ಸಿಎಂ ಹುದ್ದೆ ಉಳಿಸಿಕೊಳ್ಳಲು ಹೋಗಬೇಡಿ. ಇದಕ್ಕಾಗಿ 160 ಕೋಟಿ ಹಣ ಖರ್ಚು ಮಾಡಲಾಗಿದೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.
ಬ್ರಿಗೇಡ್ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಬಿಜೆಪಿಗೆ ಯಾವುದೇ ಕಾರಣಕ್ಕೆ ಸೇರಲ್ಲ. ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಮಾಡಿದ್ರೆ ಒಳ್ಳೆಯದು ಅಂತ ಹೇಳಿದ್ದಾರೆ. ಆರ್ ಸಿ ಬಿ ಹೆಸರು ಬಾಗಲಕೋಟಯಲ್ಲಿ ಫೈನಲ್ ಮಾಡ್ತೇವೆ. ಈ ಸಮಾಜಕ್ಕೆ ಆಗ್ತಿರೋ ಅನ್ಯಾಯದ ವಿರುದ್ಧ ಹೋರಾಟಕ್ಕೆ ಈ ಸಂಘಟನೆ. ರಾಣಿ ಚೆನ್ನಮ್ಮ – ರಾಯಣ್ಣನದ್ದು ತಾಯಿ ಮಗನ ಸಂಬಂಧ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಸೇನಾನಿಗಳು. ರಾಷ್ಟ್ರ ದ್ರೋಹಿ ಮುಸ್ಲಿಂರ ವಿರುದ್ಧ ನಮ್ಮ ಸಂಘಟನೆ. ತಲ್ವಾರ್ ಹಿಡಿದು, ಕಲ್ಲು ಹೊಡೆದ ಮುಸ್ಲಿಮರ ವಿರುದ್ಧ ನಮ್ಮ ಸಂಘಟನೆ. ರಾಯಣ್ಣ ಬ್ರಿಗೇಡ್ ಮಾಡಿದ್ದೆವು. ರಾಯಣ್ಣ ಬ್ರಿಗೇಡ್ ಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿತ್ತು. ಆದ್ರೆ ಯಡಿಯೂರಪ್ಪ ಅವರಿಗೆ ತಡೆದು ಕೊಳ್ಳಲು ಆಗಲಿಲ್ಲ. ಅಮಿತ್ ಶಾ ನಿಲ್ಲಿಸುವಂತೆ ಹೇಳಿದ್ದರು. ಅನಿವಾರ್ಯವಾಗಿ ನಿಲ್ಲಿಸಿದೆವು. ಅಪ್ಪ ಮಕ್ಕಳ ವಿರುದ್ಧ ಸೆಡ್ಡು ಹೊಡೆಯಲು ಲೋಕಸಭೆ ಚುನಾವಣೆಗೆ ನಿಂತೆ. ಪಕ್ಷ ಶುದ್ದಿಕರಣ ಆಗಬೇಕು ಅನ್ನೋದೇ ನಮ್ಮ ಉದ್ದೇಶ. ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.