Vokkagaliga Sanga : ಸಾಕಷ್ಟು ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ್ದ ಹೆಚ್.ಡಿ. ಕುಮಾರಸ್ವಾಮಿಗೆ ಇದೀಗ ಒಕ್ಕಲಿಗರ ಸಂಘದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಮುಖಭಂಗವಾಗಿದೆ. ಕಾರಣ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಿಸಿಎಂ ಡಿಕೆ ಶಿವಕುಮಾರ್ ಬಣದ ಕೆಂಚಪ್ಪ ಗೌಡ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಉಪ ಚುನಾವಣೆ ಬಳಿಕ ನಡೆದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆದಿತ್ತು. ಈ ಚುನಾವಣೆಯಲ್ಲಿ ಡಿಕೆ ಶಿವಕುಮಾರ್ ಬಣದ ಕೆಂಚಪ್ಪ ಗೌಡ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಬಣದ ಡಾ.ಆಂಜಿನಪ್ಪಗೆ ಸೋಲಾಗಿದೆ. ಕೆಂಚಪ್ಪ ಗೌಡ 21 ಮತಗಳನ್ನು ಪಡೆದುಕೊಂಡಿದ್ದು, ಡಾ.ಆಂಜಿನಪ್ಪ 14 ಮತಗಳನ್ನು ಪಡೆದುಕೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಎಲ್ ಶ್ರೀನಿವಾಸ್ ಮತ್ತು ಡಾ. ರೇಣುಕಾಪ್ರಸಾದ್ ಕೆ.ವಿ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಕೋನಪ್ಪರೆಡ್ಡಿ, ಸಹಾಯಕ ಕಾರ್ಯದರ್ಶಿಯಾಗಿ ಹನುಮಂತರಾಯಪ್ಪ. ಆರ್ ಮತ್ತು ಖಜಾಂಚಿಯಾಗಿ ಎನ್.ಬಾಲಕೃಷ್ಣ ಆಯ್ಕೆ ಆಗಿದ್ದಾರೆ. ಈ ಹಿಂದೆ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಸಿಎನ್ ಬಾಲಕೃಷ್ಣ ಅವಿರೋಧವಾಗಿ ಪುನರಾಯ್ಕೆ ಆಗಿದ್ದರು.
ಇನ್ನು ಇತ್ತೀಚೆಗೆ ನಡೆದಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಜಿದ್ದಾಜಿದ್ದಿನ ಅದೇ ಅಖಾಡದಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಒಂದು ತಿಂಗಳಿನಿಂದಲೂ ರಣತಂತ್ರ ಹೆಣೆದಿದ್ದ ಡಿಕೆ ಸಹೋದರರು, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟಿದ್ದರು. ಜೆಡಿಎಸ್ ಭದ್ರಕೋಟೆ ಅಂತಾ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮುಖಭಂಗ ಅನುಭವಿಸಿದ್ದರು. ರಾಜ್ಯದ ಗಮನ ಸೆಳೆದಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.
ಈ ಮೂಲಕ ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಸ್ಥಾನ ಇಲ್ಲದಂತೆ ಮಾಡಿರುವ ಡಿ.ಕೆ.ಶಿವಕುಮಾರ್ ಇದೀಗ ಒಕ್ಕಲಿಗ ಸಂಘದಲ್ಲೂ ತಮ್ಮ ತಂತ್ರಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಭದ್ರಕೋಟೆ ಎಂದೇ ಕರೆದಿದ್ದ ಚನ್ನಪಟ್ಟಣವು ಇದೀಗ ಕಾಂಗ್ರೆಸ್ ಹಿಡಿತಕ್ಕೆ ಬಂದಿದೆ. ಅದೇ ರೀತಿ ಒಕ್ಕಲಿಗ ಸಂಘ ಕೂಡ ಗೌಡರ ಕುಟುಂಬದ ಭದ್ರಕೋಟೆ ಎಂದೇ ಹೇಳಲಾಗುತ್ತಿತ್ತು. ಇಲ್ಲಿಯೂ ಸದ್ಯ ಕಾಂಗ್ರೆಸ್ ಜಯಭೇರಿ ಬಾರಿಸಿ, ಜೆಡಿಎಸ್‌ಗೆ ಟಕ್ಕರ್ ನೀಡಿದೆ.
ಇತ್ತೀಚೆಗೆ ಮಾತನಾಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಸಮಾಜದ ಶ್ರೇಯೋಭಿವೃದ್ಧಿಗಾಗಿ ಜನ್ಮತಾಳಿರುವ ರಾಜ್ಯ ಒಕ್ಕಲಿಗರ ಸಂಘವು ಇಂದು ಗುಂಪುಗಾರಿಕೆಯಿಂದ ಸೊರಗುತ್ತಿದೆ ಅಂತ ಬೇಸರ ವ್ಯಕ್ತಪಡಿಸಿದ್ದರು. ಒಕ್ಕಲಿಗರ ಸಂಘದ ಗುಂಪುಗಾರಿಕೆ ವಿಚಾರವಾಗಿ ಹೊರಗಡೆ ಜನ ಲಘುವಾಗಿ ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಮೂರು ತಿಂಗಳು, ಆರು ತಿಂಗಳಿಗೆ ಒಮ್ಮೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಿಕೊಂಡು ಗುಂಪುಗಾರಿಕೆ ನಡೆಸಿದರೆ, ಸಂಘದ ಗತಿ ಏನಾಗಬೇಕು? ಒಕ್ಕಲಿಗ ಸಮಾಜದ ಮಕ್ಕಳ ಭವಿಷ್ಯದ ಪ್ರಶ್ನೆ ಏನು? ಅಂತ ಕಳವಳ ವ್ಯಕ್ತಪಡಿಸಿದ್ದರು. ಇದೀಗ ಅಧ್ಯಕ್ಷ ಸ್ಥಾನ ಕೂಡ ಡಿ.ಕೆ.ಶಿವಕುಮಾರ್ ಬಣದ ಪಾಲಾಗಿರುವುದು ಹೆಚ್ .ಡಿ.ಕೆ ಗೆ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ.