Tuesday, August 5, 2025

Latest Posts

ಫ್ರೀಡಂ ಪಾರ್ಕ್‌ನಲ್ಲಿ ಗೋಡೆ ಧ್ವಂಸ, ಬಿಜೆಪಿ ಕಿಡಿ!

- Advertisement -

ಮತಕಳ್ಳತನ ಆರೋಪ ಸಂಬಂಧ ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಆಗಸ್ಟ್ 5 ರಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಪ್ರತಿಭಟನಾ ಸಮಾವೇಶ ಆಗಸ್ಟ್ 8 ಕ್ಕೆ ಮುಂದೂಡಿಕೆಯಾಗಿದೆ. ಆದ್ರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶದ ಹಿನ್ನೆಲೆಯಲ್ಲಿ ಈಗ ಬಿರುಗಾಳಿ ಬೀಸುತ್ತಿದೆ. ಫ್ರೀಡಂ ಪಾರ್ಕ್​​ನ ಪ್ರಾಚೀನ ಗೋಡೆ ನೆಲಸಮಗೊಂಡಿದೆ. ಕೇವಲ ಗೋಡೆ ಅಲ್ಲ, ಬೃಹತ್ ಮರಗಳನ್ನು ಕೂಡ ಕಡಿದು ಹಾಕಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆ

ಮತದಾನದಲ್ಲಿ ಅಕ್ರಮ ಆರೋಪದೊಂದಿಗೆ ಆಗಸ್ಟ್ 5 ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಸಜ್ಜಾಗಿತ್ತು. ರಾಹುಲ್ ಗಾಂಧಿಯ ನೇತೃತ್ವದಲ್ಲಿ ನಡೆಯಬೇಕಾದ ಈ ಸಮಾವೇಶ ಜಾರ್ಖಂಡ್ ಮಾಜಿ ಸಿಎಂ ಶಿಬು ಸೊರೇನ್ ಅವರ ನಿಧನದ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ. ಆದರೆ, ಸಮಾವೇಶದ ಸಿದ್ಧತೆಯ ಹೆಸರಿನಲ್ಲಿ ಫ್ರೀಡಂ ಪಾರ್ಕ್‌ನ ಬಹುಮಾನ್ಯವಾದ ಪ್ರಾಚೀನ ಗೋಡೆ ನೆಲಸಮ ಮಾಡಲಾಗಿದೆ ಅಂತ ಬಿಜೆಪಿ ಕಿಡಿಕಾರಿದೆ.

ಈ ಸಂಬಂಧ ಬಿಜೆಪಿ ಉಪ್ಪಾರಪೇಟೆ ಠಾಣೆಗೆ ಲಿಖಿತವಾಗಿ ದೂರು ನೀಡಿದೆ. ದೂರುದಲ್ಲಿ ಸಾರ್ವಜನಿಕ ಆಸ್ತಿಯ ನಾಶ, ಪ್ರಾಚೀನ ತಡೆಗೋಡೆ ನೆಲಸಮ, ಅನಧಿಕೃತ ಮರ ಕಟಿಂಗ್, ಯಾವುದೇ ಸರ್ಕಾರದ ಅನುಮತಿ ಇಲ್ಲದ ಕಾರ್ಯಾಚರಣೆ, ಆಡಳಿತಾಧಿಕಾರ ದುರ್ಬಳಕೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು, ಪರಿಸರ ಹಾನಿ ಈ ಎಲ್ಲ ಅಂಶಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಇದು ಕಾನೂನು ಬಾಹಿರ ಕೃತ್ಯವಾಗಿದ್ದು, ಈ ದುಷ್ಕೃತ್ಯಕ್ಕೆ ಕಾರಣವಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ. ಈ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್ ಅಥವಾ ನಗರಾಭಿವೃದ್ಧಿ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಶಾಸಕರು, ನಗರ ಪಾಲಿಕೆ ಅಧಿಕಾರಿಗಳು ಎಲ್ಲರೂ ಇಡೀ ವಿಚಾರದ ಬಗ್ಗೆ ಮೌನ ವಹಿಸಿದ್ದಾರೆ. ಈ ಮೌನವೇ ಶಂಕೆಗೆ ದಾರಿ ಮಾಡಿ ಕೊಡುತ್ತಿದೆ.

ಆಡಳಿತ ಪಕ್ಷದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮರಗಳನ್ನು ಕತ್ತರಿಸಿರುವುದು ಕಾನೂನು ಬಾಹಿರ. ಇದಕ್ಕೆ ಕಾರಣೀಭೂತರಾದ ಕಾರ್ಯಕ್ರಮದ ಆಯೋಜಕರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಬಿಜೆಪಿ ಆಗ್ರಹಿಸಿದೆ.

- Advertisement -

Latest Posts

Don't Miss