ಮೊಬೈಲ್ ಹ್ಯಾಕಿಂಗ್, ಡಿಜಿಟಲ್ ಅರೆಸ್ಟ್ ಮುಂತಾದ ಮೋಸಗಳಿಂದ ವರ್ಷಕ್ಕೆ ಸಾವಿರಾರು ಕೋಟಿ ಹಣ ಜನ ಕಳೆದುಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ವಿದ್ಯಾವಂತರೇ ಈ ಮೋಸದ ಬಲಿಯಾಗುತ್ತಿರುವುದು ಹೆಚ್ಚಾಗಿದೆ. ಇತ್ತೀಚೆಗೆ ನಟಿ ಪ್ರಿಯಾಂಕಾ ಉಪೇಂದ್ರ ಅವರೇ ಹ್ಯಾಕಿಂಗ್‌ಗೆ ಸಿಲುಕಿ 1.65 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಪ್ರಕರಣದ ಬಗ್ಗೆ ದೂರು ನೀಡಿದ್ದ ಪ್ರಿಯಾಂಕಾ ಮತ್ತು ನಟ ಉಪೇಂದ್ರ, ಜಾಗೃತಿ ಮೂಡಿಸಲು ಮಾಧ್ಯಮಗಳಿಗೂ ಮಾಹಿತಿ ಹಂಚಿಕೊಂಡಿದ್ದರು. ಈಗ ಬೆಂಗಳೂರು ಪೊಲೀಸರು ಹ್ಯಾಕರ್‌ಗಳ ಸುಳಿವು ಪತ್ತೆ ಹಚ್ಚಿದ್ದಾರೆ. ತನಿಖೆಯಿಂದ ಈ ಹ್ಯಾಕಿಂಗ್ ಬಿಹಾರ ಮೂಲದವರ ಕೃತ್ಯವೆಂಬುದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ, ಹ್ಯಾಕರ್‌ಗಳು ಮೊದಲು ಕದ್ದ ಹಣವನ್ನು ನಾಲ್ಕು ನಕಲಿ ಖಾತೆಗಳಿಗೆ ವರ್ಗಾಯಿಸಿ, ಬಳಿಕ ನಳಂದಾದ ಒಂದು ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಎಲ್ಲಾ ಖಾತೆಗಳ ವಿವರಗಳು ಈಗ ಪೊಲೀಸರ ಕೈಗೆ ಸಿಕ್ಕಿದ್ದು, ಬಿಹಾರಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ಸಿದ್ಧವಾಗಿದೆ ಎಂದು ಡಿಸಿಪಿ ಅಕ್ಷಯ್ ಮಚೀಂದ್ರ ತಿಳಿಸಿದ್ದಾರೆ.
ತನಿಖೆಯಿಂದ ತಿಳಿದುಬಂದಂತೆ, *121*9279295164# ಮಾದರಿಯ ನಂಬರನ್ನು ಬಳಸಿಕೊಂಡೇ ಖಾತೆ ಹ್ಯಾಕ್ ಮಾಡಿದ್ದಾರೆ. ಇದೇ ರೀತಿಯ ವಿಧಾನವನ್ನು ಆಂಧ್ರ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಪ್ರಯತ್ನಿಸಿರುವುದು ಪತ್ತೆಯಾಗಿದೆ.
ಹ್ಯಾಕರ್‌ಗಳು “ಪಾರ್ಸೆಲ್ ಬಂದಿದೆ” ಎಂದು ನಂಬಿಸಿ, ಪ್ರಿಯಾಂಕಾಗೆ ಕೆಲವು ನಂಬರುಗಳನ್ನು ಡಯಲ್ ಮಾಡಿಸಿದ್ದಾರೆ. ನಂತರ ಅವರ ಫೋನ್‌ನ್ನು ಕಂಟ್ರೋಲ್ ಪಡೆದು, ಮಗ ಮತ್ತು ಸಂಬಂಧಿಕರಿಗೆ ಮೆಸೇಜ್ ಮಾಡಿ ಹಣ ವರ್ಗಾಯಿಸುವಂತೆ ಹೇಳಿದ್ದಾರೆ. ಇದರಿಂದ 1.65 ಲಕ್ಷ ರೂ. ಕಳೆದುಹೋಗಿದ್ದರೂ, ಸಮಯಕ್ಕೆ ಎಚ್ಚರವಾದ ಪ್ರಿಯಾಂಕಾ ಖಾತೆ ಬ್ಲಾಕ್ ಮಾಡಿಸಿದ್ದು, ಇನ್ನೂ 10 ನಿಮಿಷ ತಡವಾಗಿದ್ದರೆ 10 ಲಕ್ಷ ರೂ. ಕಳೆದುಕೊಳ್ಳಬೇಕಿತ್ತು. ಈಗ ಪೊಲೀಸರು ಬಿಹಾರದಲ್ಲಿ ಹ್ಯಾಕರ್‌ಗಳ ಪತ್ತೆಹಚ್ಚಿ ಬಂಧಿಸಲು ಸಜ್ಜಾಗಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

