ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ, ಸೂಸೈಡ್ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ಯುವತಿಯ ಆತ್ಮಹತ್ಯೆ ಹಿಂದೆ ಪ್ರೇಮಿಯ ಪ್ರಚೋದನೆ ಇರೋದಾಗಿ ಆರೋಪಿಸಲಾಗಿದೆ. ಸಿದ್ದನಕಟ್ಟೆ ಗ್ರಾಮದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ, 20 ವರ್ಷದ ಅಶ್ವಿನಿ ನೇಣಿಗೆ ಶರಣಾಗಿದ್ರು. ಹೊಟ್ಟೆ ನೋವಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದೇ ಹೇಳಲಾಗಿತ್ತು. ಇದೀಗ ಅಶ್ವಿನಿ ಸಾವಿಗೆ ಪ್ರಿಯಕರನೇ ಕಾರಣ ಅಂತಾ ಹೇಳಲಾಗ್ತಿದೆ.
ಮೃತ ಅಶ್ವಿನಿ, ದೇವರಾಜು–ನಾಗರತ್ನಮ್ಮ ದಂಪತಿಯ ಕಿರಿಯ ಪುತ್ರಿ. ತುಮಕೂರಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದ ಅಶ್ವಿನಿ, ಊರಿಗೆ ಬಂದಾಗ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಂತ್ಯಕ್ರಿಯೆ ನೆರವೇರಿಸಿ ಬಂದ ಬಳಿಕ, ಅಶ್ವಿನಿ ಫೋನ್ ಪರಿಶೀಲಿಸಿದಾಗ, ಕುಟುಂಬಸ್ಥರು ಶಾಕ್ ಆಗಿದ್ರು. ಅಶ್ವಿನಿ ಮೊಬೈಲ್‌ನಲ್ಲಿದ್ದ ವಾಟ್ಸಾಪ್ ಮೆಸೇಜ್ ಹಾಗೂ ಆಡಿಯೋ ರೆಕಾರ್ಡ್, ವಿಡಿಯೋ ಕರೆಗಳ ಮಾಹಿತಿ ಸಿಕ್ಕಿದೆ.
ಅಶ್ವಿನಿ ಹಾಗೂ ಚೇತನ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅನುಮಾನ ಹಾಗೂ ಜಗಳಗಳಿಂದಾಗಿ ಸಂಬಂಧದಲ್ಲಿ ಬಿರುಕು ಮೂಡಿತ್ತು. ಅಶ್ವಿನಿ ಆತ್ಮಹತ್ಯೆಗೂ ಮುನ್ನ, ಇಬ್ಬರೂ ಚಾಟ್ ಮಾಡಿದ್ದಾರೆ. ನನಗಾದ ಮೋಸ ಯಾರಿಗೂ ಆಗಬಾರದು, ಬುದ್ಧಿ ಕಲಿಸುತ್ತೇನೆ ಅಂತಾ ಮೆಸೇಜ್ ಕಳುಹಿಸಿದ್ದಾಳೆ.
ಚೇತನ್‌ಗೆ ವಾಯ್ಸ್ ರೆಕಾರ್ಡ್ ಕಳಿಸಿರುವ ಅಶ್ವಿನಿ, ನೀನು ಕರೆದ ಕಡೆ ಎಲ್ಲಾ ಬರೋದಕ್ಕೆ ಆಗಲ್ಲ ಅಂತಾ, ಬಾಯಿಗೆ ಬಂದಂತೆ ಬೈದಿದ್ದಾಳೆ. ಜೊತೆಗೆ ಸಾಯುವ ಕೊನೆ ಕ್ಷಣದಲ್ಲಿ, ನೇಣಿನ ಕುಣಿಕೆ ಜೊತೆ ಅಶ್ವಿನಿ ಸೆಲ್ಫಿ ತೆಗೆದುಕೊಂಡಿದ್ದಾಳೆ. ಇದೆಲ್ಲಾ ಕುಟುಂಬಸ್ಥರ ಅನುಮಾನಕ್ಕೆ ಕಾರಣವಾಗಿದೆ.
ಮಗಳ ಸಾವಿಗೆ ಚೇತನ್ ಕಾರಣ. ನನ್ನ ಮಗಳಿಗೆ ಬೆದರಿಕೆ, ಮಾನ ಹಾನಿ, ಲೈಂಗಿಕ ಕಿರುಕುಳ, ದೈಹಿಕ ಹಿಂಸೆ, ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾನೆ ಅಂತಾ, ದೂರು ನೀಡಿದ್ದಾರೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಟ್ನಲ್ಲಿ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.