ನಮಸ್ತೇ ಸದಾ ವತ್ಸಲೇ.. ವಿಧಾನಸಭೆಯಲ್ಲಿ RSS ಗೀತೆ ಹಾಡಿದ್ದ ಡಿಸಿಎಂ ಡಿಕೆಶಿ ವಿರುದ್ಧ, ಸ್ವಪಕ್ಷದವರೇ ಆದ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಟೀಕಿಸಿದ್ದಾರೆ. ಡಿ.ಕೆ ಶಿವಕುಮಾರ್ ಸಂಸ್ಕೃತ ಬಲ್ಲವರು. ಹೀಗಾಗಿ ಅಧಿವೇಶನದಲ್ಲಿ ಸಮಯಕ್ಕೆ ತಕ್ಕಂತೆ ಉತ್ತರಿಸುವ ಬದಲು, RSS ಗೀತೆ ಹಾಡಿದ್ದಾರೆ.
RSS ಗೀತೆ ಹಾಡಿದ್ರೆ ಮುಖ್ಯಮಂತ್ರಿ ಸ್ಥಾನ ಸಿಗುವುದಾದ್ರೆ, ನಾನು ಮತ್ತು ಶಾಸಕ ಚನ್ನಾರೆಡ್ಡಿ ಪಾಟೀಲ್ ಇಬ್ಬರೂ ಹಾಡುತ್ತೇವೆ. ಹೀಗಂತ ಯಾದಗಿರಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಏನೇ ಬದಲಾವಣೆ ಆದರೂ ಆದಕ್ಕೆ ಹೈಕಮಾಂಡ್ ನೇರ ಕಾರಣವೇ ಹೊರತು, ರಾಜ್ಯದ ಬೇರೆ ಯಾರೂ ಕಾರಣ ಅಲ್ಲ. ಮಾಜಿ ಸಚಿವ ರಾಜಣ್ಣ, ದೆಹಲಿಗೆ ಹೋಗಿ ನಾಯಕರನ್ನ ಭೇಟಿ ಆಗಿದ್ದಾರೆ. ಮುಂದಿನದು ಹೈಕಮಾಂಡ್‌ಗೆ ಬಿಟ್ಟದ್ದು. ಸರ್ಕಾರ ಅಥವಾ ಕಾಂಗ್ರೆಸ್ ಪಕ್ಷದಿಂದ ವಾಲ್ಮೀಕಿ ಸಮುದಾಯವನ್ನು ತುಳಿಯುವ ಕೆಲಸ ಆಗ್ತಿದೆ ಅನ್ನೋದು ಶುದ್ಧ ಸುಳ್ಳು.
ರಾಷ್ಟ್ರ ರಾಜಕಾರಣದಲ್ಲಿ ದ್ವೇಷ, ಅಸೂಯೆ ತುಂಬಿದ್ದು, ಅಂತಹ ವಾತಾವರಣದ ನಡುವೆ, ನಮ್ಮ ನಾಯಕ ರಾಹುಲ್ ಗಾಂಧಿ, ಅತ್ಯಂತ ಸೂಕ್ಷ್ಮವಾಗಿ ಹಾಗೂ ನಾನ್ ರಿವೇಂಜ್ ಪಾಲಿಟಿಕ್ಸ್ ಮಾಡ್ತಿದ್ದಾರೆ.
ಧರ್ಮಸ್ಥಳ ರಾಜ್ಯ, ರಾಷ್ಟ್ರದ ಸಮಸ್ಯೆ ಅಲ್ಲ. ಅದೊಂದು ಧಾರ್ಮಿಕ ಕ್ಷೇತ್ರ. ಕೋರ್ಟ್ ಆದೇಶದಂತೆ ಸರ್ಕಾರ ತನಿಖೆ ನಡೆಸಿದೆ. ಅದರಿಂದ ಏನೇನು ಹೊರಬರಬೇಕೋ ಅದು ಬರುತ್ತದೆ ಅಂತಾ, ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು.
ಇನ್ನು, ಧರ್ಮಸ್ಥಳ ಕಳಂಕ ಮುಕ್ತವಾಗಬೇಕಾದ್ರೆ, ಎನ್‌ಐಎ ತನಿಖೆಯಾಗಬೇಕು. ಆಗ ಸೂತ್ರಧಾರಿಗಳು ಹೊರಬರಲಿದ್ದಾರೆ ಅಂತಾ ಹೇಳಿದ್ದಾರೆ. ಬಿಜೆಪಿ ನಾಯಕರ ಆಗ್ರಹಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.