ಬೆಂಗಳೂರು: ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾದರೂ ಮುಸ್ಲಿಂರು ಆಕ್ರೋಶ ಹೊರ ಹಾಕಿಲ್ಲ. ಹಿಂದೂಪರ ಸಂಘಟನೆಗಳು ಪ್ರಚೋದಿಸುತ್ತಿವೆ. ಭಜರಂಗದಳ, ವಿಶ್ವ ಹಿಂದೂಪರಿಷತ್ ಪ್ರಚೋದಿಸುತ್ತೇವೆ. ಹಿಜಾಬ್, ಹಲಾಲ್ ವಿವಾದ ಮುಗೀತು. ಈಗ ಧ್ವನಿವರ್ಧಕದ ವಿವಾದ ತಂದಿದ್ದಾರೆ. ನಮ್ಮದು ದೀಪ ಆರಿಸುವ ಸಂಸ್ಕೃತಿ ಅಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಮ್ಮ ಕುಟುಂಬ ಪ್ರಧಾನಿ ಸ್ಥಾನವನ್ನೇ ಬಿಟ್ಟು ಬಂದಿದೆ. ಆಸೆಪಟ್ಟಿದಿದ್ರೆ ಐದು ವರ್ಷ ದೇವೇಗೌಡರು ಪ್ರಧಾನಿಯಾಗಿ ಮುಂದುವರೆಯುತ್ತಿದ್ದರು. ಸ್ವಾಭಿಮಾನದ ಕಾರಣ ಪ್ರಧಾನಿ ಸ್ಥಾನವನ್ನ ಬಿಟ್ಟು ಬಂದರು. ಇನ್ನೂ ಸಿಎಂ ಸ್ಥಾನಕ್ಕೆ ಆಸೆಪಡುತ್ತೇವಾ ?. ಎರಡನೇ ಭಾರೀ ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ನಿವೃತ್ತಿ ತೀರ್ಮಾನ ಮಾಡಿದ್ದೆ. ಜನರ ಕಷ್ಟ ನೋಡಿ ಮತ್ತೆ ರಾಜಕೀಯ ಜೀವನ ಮುಂದುವರೆಸಿದ್ದೇನೆ ಎಂದರು.
ನಮ್ಮ ಪಕ್ಷಕ್ಕೆ ಬಹುಮತ ಕೊಡಲಿ. ಐದು ವರ್ಷಗಳಲ್ಲಿ ನೀರಾವರಿ ಯೋಜನೆಗಳನ್ನ ಪೂರ್ಣಗೊಳಿಸುತ್ತೇನೆ. ಇಲ್ಲದೇ ಇದ್ದಲ್ಲಿ ಜೆಡಿಎಸ್ ಪಕ್ಷವನ್ನೇ ಸಂಪೂರ್ಣವಾಗಿ ವಿಸರ್ಜಿಸುತ್ತೇನೆ. ಉಚಿತವಾಗಿ ಗುಣಾತ್ಮಕ ಶಿಕ್ಷಣವನ್ನ ಗ್ರಾ.ಪಂ ಮಟ್ಟದಲ್ಲಿ ಕೊಡಬೇಕು. ಅಂತಹ ಯೋಜನೆ ತರಲು ನಾನು ತೀರ್ಮಾನಿಸಿದ್ದೇನೆ. ನಾನು ಎರಡು ಭಾರಿ ಸಿಎಂ ಆದಾಗ ಎಂದೂ ರೈತರು ಬೀದಿಗೆ ಬರಲಿಲ್ಲ. ಕೋಮುಗಲಭೆಗೂ ಅವಕಾಶ ಕೊಡಲಿಲ್ಲ. ಹದಿನಾಲ್ಕು ತಿಂಗಳು ಸಿಎಂ ಆಗಿದ್ದಾಗಲೂ ಉತ್ತಮ ಕೆಲಸ ಮಾಡಿದೆ. ಆದರೆ, ಸರಿಯಾದ ಪ್ರಚಾರವೇ ಸಿಗಲಿಲ್ಲ ಎಂದರು.

