ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಈಗ ಜೈಲಿನ ಕಠಿಣ ಜೀವನದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಐಷಾರಾಮಿ ಜೀವನಕ್ಕೆ ಅಭ್ಯಾಸ ಹೊಂದಿದ್ದ ದರ್ಶನ್, ಜೈಲಿನಲ್ಲಿ ಸಿಗದ ಸೌಲಭ್ಯಗಳಿಂದ ತೊಂದರೆಯಾಗಿದೆ ಎಂದು ಕೋರ್ಟ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಚಳಿ ತುಂಬಾ ಇದೆ, ನಾವು ಮಲಗಲೂ ಆಗುತ್ತಿಲ್ಲ ಎಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
ಇಂದು ನಡೆದ ವಿಚಾರಣೆಯಲ್ಲಿ ದರ್ಶನ್ ನೀಲಿ ಟಿ-ಶರ್ಟ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿ ಕೋರ್ಟ್ ಮುಂದೆ ಹಾಜರಾದರು. ಸಹಆರೋಪಿ ನಾಗರಾಜ್ ಕೂಡ “ಮನೆಯಿಂದ ತಂದ ಕಂಬಳಿ ನೀಡುತ್ತಿಲ್ಲ” ಎಂದು ಕೋರ್ಟ್‌ಗೆ ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಡ್ಜ್, ಇಷ್ಟೇ ಚಳಿ ಇದ್ದರೂ ಕಂಬಳಿ ಕೊಡಲ್ವಾ? ಇದೇಕೆ ಪದೇ ಪದೇ ಆಗುತ್ತಿದೆ? ಎಂದು ಜೈಲು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು, ತಕ್ಷಣ ಕಂಬಳಿ ಒದಗಿಸಲು ಸೂಚನೆ ನೀಡಿದರು.
ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 3ಕ್ಕೆ ಮುಂದೂಡಲಾಗಿದೆ. ಇದೇ ವೇಳೆ ಆರೋಪಿ ಪ್ರದೋಷ್ ಮಧ್ಯಂತರ ಜಾಮೀನು ನವೆಂಬರ್ 22ರವರೆಗೆ ವಿಸ್ತಾರವಾಗಿದೆ. ದರ್ಶನ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ತಿರಸ್ಕರಿಸಿರುವುದರಿಂದ, ಮುಂದಿನ ದಿನಗಳಲ್ಲಿ ವಿಚಾರಣೆ ಇನ್ನಷ್ಟು ಗಂಭೀರ ಹಂತಕ್ಕೆ ಸಾಗುವ ಸಾಧ್ಯತೆ ಹೆಚ್ಚಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




