ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಆಯ್ಕೆಯಾಗಿದ್ದಾರೆ. ಅಣ್ಣಾ ಸಾಹೇಬ್ ಜೊಲ್ಲೆ ಬಿಜೆಪಿ ಪಕ್ಷದವರಾದರೂ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದರು.
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್ ಬಹುಮತ ಪಡೆದು ಮೇಲುಗೈ ಸಾಧಿಸಿದ್ದರು. ತೊಡೆ ತಟ್ಟಿದ್ದ ರಮೇಶ್ ಕತ್ತಿ-ಲಕ್ಷ್ಮಣ್ ಸವದಿ ಬಣಕ್ಕೆ ಹಿನ್ನಡೆಯಾಗಿತ್ತು. ರಮೇಶ್ ಕತ್ತಿ ಮತ್ತು ಲಕ್ಷ್ಮಣ್ ಸವದಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಆದರೆ, ತಮ್ಮ ಬಣದ ನಿರ್ದೇಶಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿಲ್ಲ.
ಈ ಬಗ್ಗೆ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಣ್ಣಸಾಹೇಬ್ ಜೋಲ್ಲೆ, ಉಪಾಧ್ಯಕ್ಷರಾಗಿ ರಾಜು ಕಾಗೆ ಅವ್ರನ್ನ ಆಯ್ಕೆ ಮಾಡಿದ್ದೇವೆ. 30 ತಿಂಗಳ ಅವಧಿಗೆ ಅಧಿಕಾರ ಹಂಚಿಕೆ ಮಾಡಲಾಗಿದೆ. ಬಿಜೆಪಿಗೆ ಈಗ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ಕಾಂಗ್ರೆಸ್‌ಗೆ ಉಪಾಧ್ಯಕ್ಷ ಸ್ಥಾನ ಹಂಚಿಕೊಂಡಿದ್ದೇವೆ . 30 ತಿಂಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನ, ಬಿಜೆಪಿಗೆ ಉಪಾಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಲಾಗುತ್ತದೆ.
ನಮ್ಮನ್ನ ನಂಬಿ ಅಣ್ಣಾಸಾಹೇಬ್ ಜೊಲ್ಲೆ ಬಂದಿದ್ದರು. ಹೀಗಾಗಿ ಜೊಲ್ಲೆಯವರನ್ನ ಗೆಲ್ಲಿಸಿ, ಅಧ್ಯಕ್ಷರಾಗಿ ಮಾಡುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಅಗತ್ಯವಿದೆ . ನಮ್ಮ ಪರ ಇದ್ದ ಸದಸ್ಯರನ್ನು ಸೆಳೆಯಲು, ಬೆಂಗಳೂರು, ಬೆಳಗಾವಿಯಲ್ಲೇ ಇದ್ದುಕೊಂಡು ಮಸಾಜ್ ಮಾಡಿದ್ರು . ಆದ್ರೆ, ನಾವು ಆಯುರ್ವೇದಿಕ್ ಡಾಕ್ಟರ್ ಇದ್ದೇವೆ. ಸರಿಯಾದ ಔಷಧ ಕೊಟ್ಟಿದ್ದೇವೆ . ಹೀಗಾಗಿ ಎಲ್ಲವೂ ಸರಿಯಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

