ಉತ್ತರ ಪ್ರದೇಶ : ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಐತಿಹಾಸಿಕ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ಭಾರತೀಯ ಸೈನಿಕರು ಪ್ರದರ್ಶಿಸಿದ ಬದ್ದತೆ ಹಾಗೂ ಪರಾಕ್ರಮಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಲಖನೌದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಾವು ಪಾಕಿಸ್ತಾನದ ಭಯೋತ್ಪಾದಕರ ಅಡಗುತಾಣಗಳ ಮೇಲಷ್ಟೇ ದಾಳಿ ಮಾಡಿದ್ದೇವೆ. ಬದಲಿಗೆ ಯಾವೊಬ್ಬ ನಾಗರಿಕರಿಗೂ ಹಾನಿಯಾಗದಂತೆ ನೋಡಿಕೊಂಡಿದ್ದೇವೆ. ನಮ್ಮ ದಾಳಿಯಲ್ಲಿ ನಿಖರತೆಯಿತ್ತು, ಸೇನಾ ಪಡೆಗಳು ಕೇವಲ ಭಯೋತ್ಪಾದಕ ಬೇರುಗಳನ್ನು ಟಾರ್ಗೆಟ್ ಮಾಡುವ ಮೂಲಕ ಪಾಕಿಸ್ತಾನದ ಸೇನೆಯು ಭಾರತದ ಎದುರು ಮಂಡಿಯೂರುವಂತೆ ಮಾಡಿದೆ ಎಂದು ಹೇಳಿದ್ದಾರೆ.
ನರಮೇಧಕ್ಕೆ ಪ್ರತೀಕಾರದ ಉಗ್ರ ಸಂಹಾರ..
ನಮ್ಮ ಸೇನಾ ಪಡೆಗಳು ಗಡಿಯಾಚೆಗಿನ ಭಯೋತ್ಪಾದನೆಯನ್ನು ಗುರಿಯಾಗಿಸಿ ತಮ್ಮ ಕಾರ್ಯಾಚರಣೆಯನ್ನು ಎಲ್‌ಒಸಿಯಾದ್ಯಂತಲೂ ಕೂಡ ನಡೆಸಿದ್ದವು. ಇದರಿಂದ ಗಡಿ ಭಾಗದಲ್ಲಿನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಸಾಧ್ಯವಾಗಿದೆ. ಇದು ನಮ್ಮ ಸೇನೆಯ ನಿಖರತೆಯನ್ನು ಸೂಚಿಸುತ್ತದೆ. ನರಮೇಧಕ್ಕೆ ಪ್ರತೀಕಾರವಾಗಿ ಕೈಗೊಂಡ ಉಗ್ರ ಸಂಹಾರದ ಕಾರ್ಯಾಚರಣೆ ಉದ್ದೇಶಿತ ಗುರಿಯನ್ನು ತಲುಪಿದೆ. ಅಲ್ಲದೆ ನಮ್ಮ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಸಮಯದಲ್ಲಿ ನುರಿತ ಶಸ್ತ್ರಚಿಕಿತ್ಸಕರಂತೆ ಕಾರ್ಯನಿರ್ವಹಿಸಿವೆ. ಒಂಬತ್ತು ಭಯೋತ್ಪಾದಕ ಶಿಬಿರಗಳು ಮತ್ತು ಲಾಂಚ್‌ಪ್ಯಾಡ್‌ಗಳ ಮೇಲೆ ಅತ್ಯಂತ ನಿಖರವಾಗಿ ದಾಳಿ ನಡೆಸಿ ಭಯೋತ್ಪಾದಕರನ್ನು ಬಗ್ಗು ಬಡೆದಿವೆ ಎಂದು ಸೈನಿಕರನ್ನು ಕೊಂಡಾಡಿದ್ದಾರೆ.
ಭಾರತೀಯ ಪಡೆಗಳು ಯಾರಿಗೂ ಸಾಟಿಯಿಲ್ಲದಂತೆ ಉಗ್ರರ ಮೂಲ ಪತ್ತೆ ಮಾಡಿವೆ..
ನಮ್ಮ ಪಡೆಗಳು ನುರಿತ ವೈದ್ಯರು ಅಥವಾ ಶಸ್ತ್ರಚಿಕಿತ್ಸಕರಂತೆ ಸರಿಯಾಗಿ ಕಾರ್ಯನಿರ್ವಹಿಸಿವೆ. ಒಬ್ಬ ಡಾಕ್ಟರ್ ಯಾವ ರೀತಿಯಾಗಿ ರೋಗವನ್ನು ಕಡಿಮೆ ಮಾಡಲು ನಿಖರವಾಗಿ ಅದರ ಮೂಲವನ್ನು ಪತ್ತೆ ಹಚ್ಚಲು ತನ್ನ ಉಪಕರಣಗಳನ್ನು ಬಳಸುತ್ತಾನೋ. ಹಾಗೆಯೇ ಭಾರತೀಯ ಪಡೆಗಳು ಭಯೋತ್ಪಾದನೆಯ ಮೂಲವನ್ನು ಯಾರಿಗೂ ಸಾಟಿಯಿಲ್ಲದಂತೆ ಅಷ್ಟೇ ನಿಖರತೆಯಿಂದ ಹೊಡೆದುರುಳಿಸಿವೆ ಎಂದು ಆಪರೇಷನ್ ಸಿಂಧೂರ್ ಅನ್ನು ರಾಜನಾಥ್ ವೈದ್ಯರು ರೋಗಿಗಳಿಗೆ ನಡೆಸುವ ಆಪರೇಷನ್‌ಗೆ ಹೋಲಿಸಿ ಬಾರತೀಯ ಸೇನೆಯ ದಕ್ಷತೆಯನ್ನು ಪ್ರಶಂಸಿದ್ದಾರೆ.
ಭಾರತದ ಮಿಲಿಟರಿ ಶಕ್ತಿ ಮತ್ತು ಸನ್ನದ್ಧತೆಗೆ ಒಂದು ಅದ್ಭುತ ನಿದರ್ಶನವಾಗಿದೆ..
ಇನ್ನೂ ಆಪರೇಷನ್ ಸಿಂಧೂರ್ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಅಲ್ಲಿನ ವಾಯುಪಡೆ ಸೈನಿಕರೊಂದಿಗೆ ಸಂವಾದ ನಡೆಸಿದ್ದರು. ಬಳಿಕ ಗುಜರಾತ್‌ನ ಭುಜ್ ಏರ್‌ಬೇಸ್‌ಗೆ ಭೇಟಿ ನೀಡಿ ಅದೇ ನೆಲದಿಂದಲೇ ಪಾಕ್ ವಿರುದ್ಧ ಗುಡುಗಿದ್ದ ರಾಜನಾಥ್ ಸಿಂಗ್ ಭಯೋತ್ಪಾದಕರನ್ನು ಮಟ್ಟ ಹಾಕುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದ್ದರು. ಆಪರೇಷನ್ ಸಿಂಧೂರ ವೇಳೆ ಭಾರತೀಯ ವಾಯುಪಡೆ ಮತ್ತು ಸಶಸ್ತ್ರ ಪಡೆಗಳ ಅಸಾಧಾರಣ ಪ್ರದರ್ಶನ ಇದು ಭಾರತದ ಮಿಲಿಟರಿ ಶಕ್ತಿ ಮತ್ತು ಸನ್ನದ್ಧತೆಗೆ ಒಂದು ಅದ್ಭುತ ನಿದರ್ಶನವಾಗಿದೆ ಎಂದು ಹೇಳಿದ್ದರು.
9 ಉಗ್ರರ ನೆಲೆಗಳನ್ನು ಭಾರತ ಧ್ವಂಸಗೊಳಿಸಿದ್ದನ್ನು ಇಡೀ ವಿಶ್ವವೇ ನೋಡಿದೆ..
ನಮ್ಮ ವಾಯುಪಡೆಯು ತನ್ನ ಶೌರ್ಯ, ಧೈರ್ಯ ಮತ್ತು ವೈಭವದಿಂದ ಹೊಸ ಎತ್ತರ ತಲುಪಿದೆ. ಭಯೋತ್ಪಾದನೆಯ ವಿರುದ್ಧದ ಆಪರೇಷನ್ ಸಿಂಧೂರ ಅಭಿಯಾನವನ್ನು ವಾಯುಪಡೆ ಪರಿಣಾಮಕಾರಿಯಾಗಿ ಮುನ್ನಡೆಸಿದೆ. ಆಪರೇಷನ್ ಸಿಂಧೂರದಲ್ಲಿ ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವುದಷ್ಟೇ ಅಲ್ಲ, ನಾಶ ಮಾಡುವುದರಲ್ಲೂ ಭಾರತೀಯ ಸಶಸ್ತ್ರ ಪಡೆಗಳು ಯಶಸ್ವಿಯಾಗಿವೆ. ಪಾಕ್ನ ಹಲವು ವಾಯು ನೆಲೆಗಳು ನಾಶವಾಗಿವೆ. ಪಾಕಿಸ್ತಾನದಲ್ಲಿನ 9 ಉಗ್ರರ ನೆಲೆಗಳನ್ನು ಭಾರತ ಧ್ವಂಸಗೊಳಿಸಿದ್ದನ್ನು ಇಡೀ ವಿಶ್ವವೇ ನೋಡಿದೆ. ಈ ಮೂಲಕ ನವ ಭಾರತದ ಸಂದೇಶವನ್ನು ಜಗತ್ತಿಗೆ ರವಾನಿಸಿದ್ದೀರಿ ಎಂದು ಸೇನಾ ಸಿಬ್ಬಂದಿಯನ್ನು ರಾಜನಾಥ್ ಸಿಂಗ್ ಹೊಗಳಿದ್ದರು.
ಪಾಕಿಸ್ತಾನಕ್ಕೆ ಐಎಂಎಫ್ ಹಣಕಾಸು ನೆರವು ನೀಡುವುದನ್ನು ಮರು ಪರಿಶೀಲಿಸಬೇಕು. ಸದ್ಯದ ಮಟ್ಟಿಗೆ ಪಾಕಿಸ್ತಾನಕ್ಕೆ ನೀಡುವ ಹಣಕಾಸು ಸೇರಿ ಯಾವುದೇ ನೆರವು ಕೂಡ ಭಯೋತ್ಪಾದನೆಗೆ ನೀಡಿದಂತಾಗಲಿದೆ. ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಇದು ಟ್ರೇಲರ್ ಅಷ್ಟೇ: ನಾವು ಪಾಕಿಸ್ತಾನಕ್ಕೆ ಸಮಯ ನೀಡಿದ್ದೇವೆ. ಅವರ ನಡವಳಿಕೆ ಸುಧಾರಿಸಿದರೆ ಸರಿ, ಇಲ್ಲದಿದ್ದರೆ, ಅದಕ್ಕೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ. ಸದ್ಯ ಏನೇ ನಡೆದರೂ ಅದು ಕೇವಲ ಟ್ರೇಲರ್ ಮಾತ್ರ. ಸರಿಯಾದ ಸಮಯ ಬಂದಾಗ, ನಾವು ಪೂರ್ತಿ ಸಿನಿಮಾವನ್ನು ಜಗತ್ತಿಗೆ ತೋರಿಸುತ್ತೇವೆ ಎಂದು ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದರು.