ಮಂಗಳೂರು : ಇಲ್ಲಿನ ಬಜ್ಪೆಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವೇ ಕಾರಣವಾಗಿದೆ ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಸುಹಾಸ್ ಶೆಟ್ಟಿಯ ಕೊಲೆಯ ಬಳಿಕ ಉದ್ವಿಗ್ನವಾಗಿದ್ದ ಮಂಗಳೂರಿಗೆ ಇಂದು ಭೇಟಿ ನೀಡಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಪದೇ ಪದೇ ಮಂಗಳೂರಲ್ಲಿ ಈ ರೀತಿಯ ಕೋಮು ಸೌಹಾರ್ದತೆ ನಡೆಯುತ್ತಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಳಿಕ ಘಟನೆಯ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಅವರು, ಸುಹಾಸ್ ಶೆಟ್ಟಿ ಕೊಲೆಯಲ್ಲಿ ಭಾಗಿಯಾಗಿದ್ದ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಸುಮಾರು ವರ್ಷದಿಂದ ಕೋಮುವಾದ ಹಿನ್ನೆಲೆಯಲ್ಲಿ ರಾಷ್ಟ್ರದ ಗಮನ ಸೆಳೆದಿದೆ. ಈ ಬಾರಿಯೂ ಈ ಘಟನೆಯು ಮತ್ತೆ ಅದನ್ನು ಮರುಕಳಿಸಿದೆ ಎನ್ನುವ ಅಭಿಪ್ರಾಯ ಮೂಡಿದೆ. ಈ ಘಟನೆಯನ್ನು ನಾಗರಿಕ ಸಮುದಾಯ ಇಷ್ಟ ಪಡುವುದಿಲ್ಲ. ಸುಹಾಸ್ ಹಾಗೂ ಅಶ್ರಫ್ ಕೊಲೆಯಿಂದ ಜಿಲ್ಲೆಯ ಕೋಮುಸೌಹಾರ್ದಕ್ಕೆ ಧಕ್ಕೆಯಾಗಿದೆ. ಸುಹಾಸ್ ಕೊಲೆಯಲ್ಲಿ 8 ಜನ, ಅಶ್ರಫ್ ಕೊಲೆಯಲ್ಲಿ 21 ಜನ ಆರೋಪಿಗಳನ್ನು ಬಂಧಿಸಿದ್ದೇವೆ. ಯಾರನ್ನೂ ಕಾನೂನು ಉಲ್ಲಂಘನೆ ಮಾಡಲು ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಶಾಂತಿಗಾಗಿ ನಾವು ಪಾದಯಾತ್ರೆ ನಡೆಸಿದ್ದೆವು..
ಕಾನೂನು ಉಲ್ಲಂಘನೆ ಮಾಡುವವರನ್ನು ಹತ್ತಿಕ್ಕಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆ ಶಾಂತಿಯಿಂದ ಇರಬೇಕು. ಹಿಂದೆ ಈ ಜಿಲ್ಲೆಯಲ್ಲೂ ಶಾಂತಿಗಾಗಿ ನಾವು ಪಾದಯಾತ್ರೆ ನಡೆಸಿದ್ದೆವು. ಸರ್ಕಾರ ಒಂದು ತೀರ್ಮಾನಕ್ಕೆ ಬಂದಿದೆ. ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಬಾರದೆಂದು ನಾವು ಹೊಸದಾಗಿ ಒಂದು ಆ್ಯಂಟಿ ಕಮ್ಯುನಲ್ ಫೋರ್ಸ್‌ನ್ನ ಪ್ರತ್ಯೇಕವಾಗಿ ರಚಿಸುತ್ತೇವೆ. ಆ್ಯಂಟಿ ನಕ್ಸಲ್ ಫೋರ್ಸಿನಂತೆಯೇ ಇದು ಕೂಡ ಪ್ರತ್ಯೇಕವಾಗಿ ಕೋಮುವಾದ ನಿಗ್ರಹ ಪಡೆ ಕೆಲಸ ಮಾಡುತ್ತದೆ ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಕೋಮು ನಿಗ್ರಹ ಪಡೆ ರಚನೆ : ಪರಮೇಶ್ವರ್ ಘೋಷಣೆ..
ಯಾರು ಕೋಮುವಾದ ಮಾಡುವವರನ್ನು ಹಾಗೂ ಅದರ ಹಿಂದಿನಿಂದ ಯಾರು ಕೆಲಸ ಮಾಡುತ್ತಾರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳಲು ಕೋಮು ನಿಗ್ರಹ ಪಡೆಗೆ ಸಂಪೂರ್ಣ ಅಧಿಕಾರ ನೀಡುತ್ತೇವೆ. ಈ ಎರಡು ಜಿಲ್ಲೆಗಳಲ್ಲಿ ಈ ಫೋರ್ಸ್ ಕೆಲಸ ಮಾಡಲಿದೆ. ಯಾರು ಈ ಜಿಲ್ಲೆಯಲ್ಲಿ ಕಮ್ಯುನಲ್ ಭಾಷಣ ಮಾಡುತ್ತಾರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಅನುಮತಿ ನೀಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ಶಾಂತಿಯಿಂದ ಇರಬೇಕು. ಜನರೂ ಇಲ್ಲಿಗೆ ಬರಬೇಕು. ಅದಕ್ಕೆ ಬೇಕಾದ ಎಲ್ಲಾ ಕೆಲಸಗಳನ್ನು ಸರ್ಕಾರ ಮಾಡುತ್ತದೆ. ಐಜಿಪಿ ನೇತೃತ್ವದಲ್ಲಿ ಎರಡು ಜಿಲ್ಲೆಯಲ್ಲಿ ಮಾತ್ರ ಈ ಕೋಮುವಾದ ನಿಗ್ರಹ ಪಡೆ ಕೆಲಸ ಮಾಡುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎಷ್ಟೇ ಪ್ರಭಾವಿಗಳಾಗಿದ್ರು ಬಿಡುವುದಿಲ್ಲ..
ಶೀಘ್ರದಲ್ಲೇ ರಚನೆಯಾಗಲಿರುವ ಕೋಮು ವಿರೋಧಿ ಕಾರ್ಯಪಡೆ ಹಿಂದಿನ ಕೋಮು ಗಲಭೆಗಳ ತನಿಖೆ ನಡೆಸುತ್ತದೆ. ಮುಂದೆ, ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ,ಅವರು ರಾಜಕೀಯ ನಾಯಕರಾಗಿದ್ದರೂ ಸಹ, ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಯಾರೇ ಆಗಲಿ ಯಾವುದೇ ಪಕ್ಷವಾಗಲಿ, ಯಾವುದೇ ಧರ್ಮದವರಾಗಲಿ ಕೋಮುಭಾವನೆ ಕೆಡಿಸೋ ಹೇಳಿಕೆ ನೀಡಿದ್ರೆ ಕ್ರಮಕೈಗೊಳ್ಳಿತ್ತೇವೆ. ಈ ಪ್ರಕರಣದಲ್ಲಿ 8 ಆರೋಪಿಗಳು ಯಾವ ಹೇಳಿಕೆಗಳನ್ನು ನೀಡುತ್ತಾರೆ ಅದರ ಮೇಲೆ ಕೊಲೆಯ ಕುರಿತು ಇನ್ನಷ್ಟು ಕಾರಣ ಬಯಲಾಗಲಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಇಬ್ಬರು ಹಿಂದೂಗಳು ಭಾಗಿ..
ಇನ್ನೂ ಸುಹಾಸ್ ಶೆಟ್ಟಿ ಹತ್ಯೆಯ ಪ್ರಕರಣದಲ್ಲಿ ಒಟ್ಟು ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ. ಗೃಹ ಸಚಿವರ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡಿರುವ ಅವರು, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 5 ತಂಡಗಳನ್ನು ರಚಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಬಲೆಗೆ 8 ಮಂದಿ ಶಂಕಿತ ಆರೋಪಿಗಳು ಬಿದ್ದಿದ್ದಾರೆ. ಸುಹಾಸ್ ಶೆಟ್ಟಿ ಕೊಲೆ ಕೇಸ್‌ನಲ್ಲಿ ಬಂಧಿತರಾಗಿದ್ದವರಲ್ಲಿ ಇಬ್ಬರು ಹಿಂದುಗಳು ಇರುವುದು ದೃಢಪಟ್ಟಿದೆ. ಆದರೆ, ಈ ಹಿಂದೆ ಕೊಲೆಯಾಗಿದ್ದ ಫಾಜಿಲ್ ತಮ್ಮ ಆದಿಲ್‌ನು ಸುಹಾಸ್ ಕೊಲೆಗೆ ಸಂಚು ಹೂಡಿದ್ದು, 5 ಲಕ್ಷ ರೂಪಾಯಿ ಸುಪಾರಿ ಕೊಟ್ಟು ಕೊಲೆ ಮಾಡಿದ್ದಾಗಿಯೂ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಪ್ರತೀಕಾರದ ಹತ್ಯೆಯಾಗಿದ್ದು ಸಾಬೀತು..!
ಸಫ್ವಾನ್ ಪ್ರಮುಖ ಆರೋಪಿ. 2023ರಲ್ಲಿ ಅಬ್ದುಲ್ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಸಫ್ವಾನ್ಗೆ ಸುಹಾಸ್ ಶೆಟ್ಟಿ ಕೊಲೆ ಮಾಡುವ ಭಯ ಇತ್ತು. ಹಾಗಾಗಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದರು. ಅದಕ್ಕಾಗಿ ಫಾಜಿಲ್ ತಮ್ಮ ಆದಿಲ್ ಮೆಹರೂಫ್ ನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನಿಸಿದ್ದರು.
ಈ ಪ್ರಕರಣದಲ್ಲಿ ಇಬ್ಬರೂ ಹಿಂದೂಗಳು ಸೇರಿದಂತೆ, 29 ವರ್ಷದ ಅಬ್ದುಲ್ ಸಫ್ವಾನ್, 28 ವರ್ಷದ ನಿಯಾಜ್, 31 ವರ್ಷದ ಕಲಂದರ್ ಶಾಫಿ, 32 ವರ್ಷದ ಮೊಹಮ್ಮದ್ ಮುಝಮ್ಮಿಲ್, 19 ವರ್ಷದ ರಂಜಿತ್, 20 ವರ್ಷದ ನಾಗರಾಜ್ ಹಾಗೂ 28 ವರ್ಷದ ಮೊಹಮ್ಮದ್ ರಿಜ್ವಾನ್ ಮತ್ತು ಆದಿಲ್ ಮೆಹರೂಫ್ ಬಂಧಿತರಾಗಿದ್ದಾರೆ. ಸುಹಾಸ್ ಕೊಲೆ ಮಾಡಲು ಸಫ್ವಾನ್ ತಂಡಕ್ಕೆ ಆದಿಲ್ 5 ಲಕ್ಷ ರೂಪಾಯಿ ನೀಡಿದ್ದ. ಬಳಿಕ ಇವರು ನಿಯಾಜ್ ಸ್ನೇಹಿತರಾದ ನಾಗರಾಜ್ ಮತ್ತು ರಂಜಿನ್ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ವಾಸವಿದ್ದರು. ಮೇ 1ರಂದು ಸುಹಾಸ್ ಚಲನವಲನ ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ. ಈ ಮೂಲಕ ಅಣ್ಣನ ಹತ್ಯೆಯ ಪ್ರತೀಕಾರಕ್ಕೆ ಆದಿಲ್ ಹಿಂದೂಗಳನ್ನೂ ಬಳಸಿಕೊಂಡಿರುವುದು ಬೆಳಕಿಗೆ ಬಂದಂತಾಗಿದೆ.