ಬೆಂಗಳೂರು ಬಿಟ್ಟು ಹೋಗಲ್ಲ… ಬ್ಲಾಕ್‌ಬಕ್‌ CEO ಯಾಬಾಜಿ ಸ್ಪಷ್ಟನೆ

ಸಿಲಿಕಾನ್‌ ಸಿಟಿ ರಸ್ತೆಗಳ ಗುಂಡಿಗಳ ಸಮಸ್ಯೆಯಿಂದ ಸಾರ್ವಜನಿಕರು ಸೇರಿದಂತೆ ಐಟಿ ಕಂಪನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೆಲ ಕಂಪನಿಗಳು ಬೆಂಗಳೂರು ತೊರೆಯುವ ಸಾಧ್ಯತೆಗಳ ಬಗ್ಗೆ ಊಹಾಪೋಹಗಳು ಮೂಡಿದ್ದವು. ಈ ಪೈಕಿ ಬ್ಲಾಕ್‌ಬಕ್ ಕಂಪನಿಯ ಕುರಿತು ಹರಿದಾಡಿದ ವದಂತಿಗಳಿಗೆ ಇದೀಗ ಕಂಪನಿ CEO ರಾಜೇಶ್ ಯಾಬಾಜಿ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

2015ರಲ್ಲಿ ಬೆಂಗಳೂರಿನ ಕೋರಮಂಗಲದ ಸೋನಿ ಸಿಗ್ನಲ್ ಬಳಿ ಬ್ಲಾಕ್‌ಬಕ್ ತನ್ನ ಸಣ್ಣ ಕಚೇರಿಯನ್ನು ಆರಂಭಿಸಿತು. ಕಂಪನಿ ವಿಸ್ತರಿಸುತ್ತಿದ್ದಂತೆ 2016ರಲ್ಲಿ ಬೆಳ್ಳಂದೂರು-ಹೊರ ವರ್ತುಲ ರಸ್ತೆಗೆ ಸ್ಥಳಾಂತರಗೊಂಡೆವು. ಹೊರ ವರ್ತುಲ ರಸ್ತೆ ಮತ್ತು ಬೆಂಗಳೂರು ನಗರವು ನಮ್ಮ ಸಂಸ್ಥೆಗೆ ಅಗತ್ಯವಿರುವ ಮೂಲಸೌಕರ್ಯ, ಸಂಪನ್ಮೂಲ ಹಾಗೂ ಪ್ರತಿಭೆಯನ್ನು ಒದಗಿಸಿತು. ಇದರಿಂದ ನಮ್ಮ ಕಂಪನಿ ದೇಶದ ಮಟ್ಟಿಗೆ ಟ್ರಕ್ಕಿಂಗ್‌ ಕ್ಷೇತ್ರದಲ್ಲಿ ದೊಡ್ಡ ಪರಿಣಾಮ ಬೀರುವ ಮಟ್ಟಿಗೆ ಬೆಳೆಯಿತು ಎಂದು ತಿಳಿಸಿದ್ದಾರೆ.

ಕಳೆದ ದಶಕದಲ್ಲಿ ಕರ್ನಾಟಕದ ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಅತಿದೊಡ್ಡ ಫಲಾನುಭವಿಗಳಲ್ಲಿ ನಾವೂ ಒಬ್ಬರು. ಬೆಂಗಳೂರು ನಮ್ಮ ಸಾಧನೆಗೆ ಬೆನ್ನೆಲುಬಾಗಿದ್ದು, ಮುಂದಿನ ದಿನಗಳಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನಾವು ನಗರವನ್ನು ತೊರೆಯುತ್ತಿರುವೆವು ಎಂಬ ಮಾತುಗಳನ್ನು ನಾವು ಸಂಪೂರ್ಣವಾಗಿ ನಿರಾಕರಿಸುತ್ತೇವೆ ಎಂದಿದ್ದಾರೆ.

ನಗರ ಬಿಟ್ಟು ಹೋಗುವ ಬದಲು ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಇದು ನಮ್ಮ ಉದ್ಯೋಗಿಗಳಿಗೆ ಪ್ರಯಾಣ ಇನ್ನಷ್ಟು ಸುಲಭವಾಗಲು ಸಹಾಯ ಮಾಡುತ್ತದೆ. ಜೊತೆಗೆ ಉತ್ತಮ ವ್ಯಾಪಾರ ಕಾರ್ಯಾಚರಣೆಗಾಗಿ ಅಗತ್ಯವಿರುವ ಮೂಲಸೌಕರ್ಯ ಸುಧಾರಣೆಗಳ ವಿಷಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಸಹಕಾರ ಪಡೆಯಲು ಮುಂದಾಗಿದ್ದೇವೆ ಎಂದು ಯಾಬಾಜಿ ಹೇಳಿದ್ದಾರೆ.

ವರದಿ:ರಂಜಿತ ರೇವಣ್ಣ ನಾಟನಹಳ್ಳಿ

About The Author