ಸಿಎಂ ಸಿದ್ದರಾಮಯ್ಯ, ಮೈಸೂರಲ್ಲಿ ಶಕ್ತಿ ಪ್ರದರ್ಶನ ಯಶಸ್ವಿಯಾಗಿ ಮುಗಿಸಿದ್ದಾರೆ. ಇದಾದ ಬಳಿಕ ಅವರು 3 ದಿನಗಳ ಜಿಲ್ಲಾ ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಆಗಸ್ಟ್ 31 ರಿಂದ ಸೆಪ್ಟೆಂಬರ್ 2ರವರೆಗೆ ನಡೆಯುವ ಈ ಪ್ರವಾಸದಲ್ಲಿ, ಅನೇಕ ಕಾರ್ಯಕ್ರಮಗಳು, ಉದ್ಘಾಟನೆಗಳು ಹಾಗೂ ಸಮಾರಂಭಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಆಗಸ್ಟ್ 31ರಂದು ಬೆಳಿಗ್ಗೆ 10.55ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರು ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸುವರು. ಮೊದಲಿಗೆ ದಸರಾ ವಸ್ತುಪ್ರದರ್ಶನ ಆವರಣಕ್ಕೆ ತೆರಳಿ, ಚಲನಚಿತ್ರ ನಿರ್ಮಾಪಕ ಮತ್ತು ವಿಧಾನಪರಿಷತ್ ಮಾಜಿ ಸದಸ್ಯರಾದ ಸಂದೇಶ್ ನಾಗರಾಜ್ ಅವರ 80ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅದರ ಬಳಿಕ ಮಧ್ಯಾಹ್ನ 3 ಗಂಟೆಗೆ ರಸ್ತೆ ಮಾರ್ಗವಾಗಿ ನಂಜನಗೂಡಿಗೆ ತೆರಳುವರು. ಅಲ್ಲಿ ಶ್ರೀಕಂಠೇಶ್ವರ ದೇವಸ್ಥಾನದ ದಾಸೋಹ ಭವನದಲ್ಲಿ, ಜಿಲ್ಲಾಡಳಿತ ಆಯೋಜಿಸಿರುವ ಭಗೀರಥ ಜಯಂತ್ಯುತ್ಸವದಲ್ಲಿ ಭಾಗವಹಿಸುವರು. ಹಾಗೆಯೇ, ಉಪ್ಪಾರ ಸಮುದಾಯ ಭವನದ ಶಂಕುಸ್ಥಾಪನೆ ಸಮಾರಂಭಕ್ಕೂ ಅವರು ಹಾಜರಾಗಲಿದ್ದಾರೆ. ಸಂಜೆಯ ವೇಳೆಗೆ ನಗರಕ್ಕೆ ಮರಳಿ ವಾಸ್ತವ್ಯ ಹೂಡುವರು.
ಮುಂದಿನ ದಿನ, ಅಂದರೆ ಸೆಪ್ಟೆಂಬರ್ 1ರಂದು ಬೆಳಿಗ್ಗೆ 10.50ಕ್ಕೆ, ಮುಖ್ಯಮಂತ್ರಿ ತಮ್ಮ ಹುಟ್ಟೂರಾದ ಸಿದ್ದರಾಮನಹುಂಡಿಗೆ ತೆರಳುವರು. ಅಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಿರ್ಮಿಸಲಾದ ಪಿಎಂಶ್ರೀ – ಕರ್ನಾಟಕ ಪಬ್ಲಿಕ್ ಶಾಲೆಯ ಹೊಸ ಕಟ್ಟಡವನ್ನು ಅವರು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಅಲ್ಲಿಂದ ಮುಂದಿನ ಕಾರ್ಯಕ್ರಮಕ್ಕೆ ತೆರಳುವರು.
ಅದೇ ದಿನ ಮಧ್ಯಾಹ್ನ 3.10ಕ್ಕೆ, ಮುಖ್ಯಮಂತ್ರಿ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸುವರು. ಅವರೊಂದಿಗೆ ಸೇರಿ ಮಧ್ಯಾಹ್ನ 3.45ಕ್ಕೆ ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ – ಆಯಿಷ್ ನ ನೈಮಿಶಾಮ್ ಕ್ಯಾಂಪಸ್‌ನಲ್ಲಿ ನಡೆಯುವ ವಜ್ರ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸುವರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ