ನಿತ್ಯ ಪೂಜೆಯನ್ನ ಬೆಳಗ್ಗೆ ಮಾಡಬೇಕಾ? ಸಂಧ್ಯಾಕಾಲ ಸೂಕ್ತವೋ ? ಎಂಬ ಪ್ರಶ್ನೆ ಅನೇಕರಲ್ಲಿ ಇರುತ್ತದೆ. ಸಾಮಾನ್ಯವಾಗಿ ಬ್ರಾಹ್ಮೀ ಮುಹೂರ್ತ ಹಾಗೂ ಗೋದೂಳಿ ಮುಹೂರ್ತ ಎರಡೂ ದೈವಾರಾಧನೆಗೆ ಅತ್ಯುತ್ತಮ ಸಮಯವೆಂದು ಶಾಸ್ತ್ರಗಳು ಹೇಳುತ್ತವೆ. ಆದರೆ ಇದಕ್ಕಿಂತ ಮುಖ್ಯವಾದದ್ದು ನಮ್ಮ ಮನಸ್ಸಿನ ನಿರ್ಮಲತೆ, ಭಕ್ತಿ ಮತ್ತು ಭಗವಂತನ ಸ್ಮರಣೆ.
ಅಧ್ಯಾತ್ಮದ ದೃಷ್ಟಿಯಿಂದ, ಜೀವನದಲ್ಲಿ ಸಂಭವಿಸುವ ಪ್ರತಿಯೊಂದು ಸಂಗತಿಯೂ ದೈವ ಅನುಗ್ರಹವಿಲ್ಲದೆ ಸಾಧ್ಯವಿಲ್ಲ ಎನ್ನುವುದು ನಂಬಿಕೆ. “ತ್ವೇನ ವಿನಾ ತೃಣಮಪಿ ನ ಚಲತಿ” ಎಂಬ ಮಾತಿನರ್ಥವೇ ಇದೇ. ಹೀಗಾಗಿ ನಾವು ಮಾಡುವ ಪ್ರಾರ್ಥನೆಗಳು ಕೇವಲ ಸಂಕಷ್ಟ ಪರಿಹಾರಕ್ಕೆ ಮಾತ್ರ ಸೀಮಿತವಾಗಿರಬಾರದು. ಸದ್ಗುಣಗಳನ್ನು ಕಾಪಾಡಿಕೊಳ್ಳಲು, ಮನಸ್ಸು ಶಾಂತವಾಗಲು ಹಾಗೂ ಅಹಂಕಾರವನ್ನು ತಗ್ಗಿಸಿಕೊಳ್ಳಲು ಪ್ರಾರ್ಥನೆ ಸಹಕಾರಿ.
ಬೆಳಗಿನ ಜಾವ, ವಿಶೇಷವಾಗಿ ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡುವುದನ್ನು ಉತ್ತಮವೆಂದು ಹೇಳಲಾಗುತ್ತದೆ. ಆದರೆ ಅನೇಕರು ಕೆಲಸಕ್ಕೆ ಹೋಗುವ ತುರ್ತು, ಮನೆ ಕೆಲಸಗಳು ಅಥವಾ ಸಮಯದ ಕೊರತೆ ಕಾರಣದಿಂದ ಈ ಸಮಯದಲ್ಲಿ ಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಇಂತಹವರಿಗೆ ಸಂಧ್ಯಾಕಾಲವೂ ಪೂಜೆಗೆ ಸಮರ್ಪಕ ಸಮಯವಾಗುತ್ತದೆ. ಸೂರ್ಯೋದಯ ಮತ್ತು ಸೂರ್ಯಾಸ್ತ, ಇವೆರಡೂ ಪ್ರಕೃತಿಯ ಅತ್ಯಂತ ಸದ್ಗುಣಿ ಕ್ಷಣಗಳು ಎಂದು ಪರಿಗಣಿಸಲಾಗಿದೆ.
ಸಂಧ್ಯಾಕಾಲದಲ್ಲಿ ಪೂಜೆ ಮಾಡಲು ಸ್ನಾನ ಕಡ್ಡಾಯವಲ್ಲ. ತಣ್ಣೀರಿನ ಪ್ರೋಕ್ಷಣೆಯಾದರೂ ಸಾಕು. ದೀಪ ಹಚ್ಚಿ ಕುಳಿತುಕೊಂಡು ಧ್ಯಾನ, ಜಪ, ಪಾರಾಯಣ, ಆರತಿ ಮಾಡುವುದೇ ಸಾಕಷ್ಟು ಪವಿತ್ರ. ಶಾಸ್ತ್ರದ ಮಾತು,“ಪತ್ರಂ ಪುಷ್ಪಂ ಫಲಂ ತೋಯಂ…” ಅಲ್ಪವಾದ ದ್ರವ್ಯವಿದ್ದರೂ ಭಕ್ತಿಯೇ ಮುಖ್ಯ. ಭಗವಂತನಿಗೆ ರೂಪ, ಹೂವು, ನೈವೇದ್ಯ, all secondary. ಶುದ್ಧ ಮನಸ್ಸಿನ ಭಾವನೆವೇ ಮಹತ್ವದ್ದು.
ಬೆಳಗ್ಗೆ ಪೂಜೆ ಮಾಡಲು ಸಾಧ್ಯವಾಗದವರು ಸಂಜೆಗೆ ಹತ್ತು ನಿಮಿಷ ಪ್ರಶಾಂತವಾಗಿ ಕುಳಿತು, ಮೊಬೈಲ್ ಅನ್ನು ದೂರವಿಟ್ಟು, ನಿಶ್ಚಲ ಮನಸ್ಸಿನಿಂದ ಭಗವಂತನ ಸ್ಮರಣೆ ಮಾಡಬಹುದು. ಸನಾತನ ಧರ್ಮದ ಸೌಂದರ್ಯವೇನೆಂದರೆ , ಯಾವುದೇ ಸಮಯದಲ್ಲಿಯೂ ಶ್ರದ್ಧೆಯೊಂದಿಗೆ ಮಾಡಿದ ಪ್ರಾರ್ಥನೆ ವ್ಯರ್ಥವಾಗದು. ನಿರ್ಮಲ ಮನಸ್ಸು, ಭಕ್ತಿ, ನಂಬಿಕೆ ಇದ್ದರೆ ಯಾವುದೇ ವೇಳೆಯಲ್ಲಿ ಮಾಡಿದ ಪೂಜೆಯೂ ಸಾರ್ಥಕವಾಗುತ್ತದೆ.
ವರದಿ : ಗಾಯತ್ರಿ ಗುಬ್ಬಿ

