ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಟ್ರಕ್ ಹರಿದು, 9 ಮಂದಿ ದಾರುಣವಾಗಿ ಅಂತ್ಯಕಂಡಿದ್ದಾರೆ. 25 ಜನರ ಸ್ಥಿತಿ ಗಂಭೀರವಾಗಿದೆ. ವಿಘ್ನ ನಿವಾರಕ ಗಣೇಶನ ಕಣ್ಮುಂದೆಯೇ, ಯಾರೂ ಊಹಿಸದ ಘನಘೋರ ದುರಂತ ಸಂಭವಿಸಿದೆ. ಅಷ್ಟಕ್ಕೂ ಹಾಸನ ಮರಣ ಮೃದಂಗಕ್ಕೆ, ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗ್ತಿದೆ.
ಟ್ರಕ್ ಚಾಲಕ ಭುವನೇಶ್ವರ್ ಮದ್ಯಪಾನ ಮಾಡಿ ಡ್ರೈವಿಂಗ್ ಮಾಡ್ತಿದ್ದ ಅಂತಾ ಹೇಳಲಾಗ್ತಿದೆ. ಮೊಸಳೆ ಹೊಸಳ್ಳಿಯಲ್ಲಿ ಕಳೆದ 50 ವರ್ಷಗಳಿಂದ, ಗಣೇಶನನ್ನ ಕೂರಿಸುತ್ತಿದ್ದೇವೆ. ಯಾವ ವರ್ಷವೂ ಈ ರೀತಿ ಘಟನೆ ನಡೆದಿರಲಿಲ್ಲ. ಪ್ರತಿ ಭಾರಿ ಮುತುವರ್ಜಿ ವಹಿಸಿ, ಸರ್ಕಾರದ ನಿರ್ದೇಶನದ ಪ್ರಕಾರವೇ ಗಣೇಶ ಹಬ್ಬ ಆಚರಿಸುತ್ತಿದ್ದೇವೆ.
ಈ ಬಾರಿ ಕ್ಯಾಂಟರ್ ಚಾಲಕನ ಅಜಾಗರೂಕತೆ, ಆತನ ಮದ್ಯಪಾನ, 9 ಮಂದಿಯನ್ನು ಬಲಿಪಡೆದಿದೆ. ನೂರಾರು ಜನರು ಸೇರಿದ್ರೂ, ಚಾಲಕ ಅತೀ ವೇಗವಾಗಿ ಟ್ರಕ್ ಚಲಾಯಿಸಿದ್ದ. ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ಹೀಗಂತ ಪ್ರತ್ಯಕ್ಷ ದರ್ಶಿಗಳು ಆರೋಪಿಸಿದ್ದಾರೆ.
ಆಕ್ಸಿಡೆಂಟ್ ಮಾಡಿದ ಟ್ರಕ್, ಖಾಸಗಿ ಸರಕು ಸಾಗಾಣೆ ಕಂಪನಿಗೆ ಸೇರಿದ್ದೆಂದು ಗೊತ್ತಾಗಿದೆ. ಹಾಸನ ನಗರದಿಂದ ಹೊಳೆನರಸೀಪುರದ ಕಡೆಗೆ ಹೋಗ್ತಿತ್ತು. ಡಿವೈಡರ್‌ಗೆ ಡಿಕ್ಕಿಯಾಗಿ ಬೈಕ್‌ಗೆ ಗುದ್ದಿ, ಮೆರವಣಿಗೆ ಮೇಲೆ ಹರಿದಿತ್ತು.
ಬೈಕ್ ಚಾಲಕ ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಟ್ರಕ್ ಚಾಲಕ ಭುವನೇಶ್‌ಗೂ ಗಾಯಗಳಾಗಿವೆ. ಚಾಲಕನನ್ನು ಸ್ಥಳೀಯರು ಕ್ಯಾಂಟರ್‌ನಿಂದ ಹೊರಗೆಳೆದು ಹೊಡೆದಿದ್ದಾರೆ. ಮತ್ತಷ್ಟು ಗಾಯಗೊಂಡಿ ಭುವನೇಶ್‌ನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತ ಹೊಳೆನರಸೀಪುರದ ಕಟ್ಟೆಬೆಳಗುಲಿಯ ನಿವಾಸಿ ಎಂದು ಗುರುತಿಸಲಾಗಿದೆ.