Monday, August 4, 2025

Latest Posts

ರಾಶಿ, ರಾಶಿ ನವಿಲುಗಳ ನಿಗೂಢ ಅಂತ್ಯ – ಏನಾಯ್ತು?

- Advertisement -

ಇತ್ತೀಚೆಗೆ ಕಾಡುಮೃಗಗಳ ಮೇಲೆ ನಡೆಯುತ್ತಿರುವ ಹಲ್ಲೆಗಳ ಸರಮಾಲೆಗೆ ಈಗ ತುಮಕೂರು ಜಿಲ್ಲೆಯಲ್ಲಿ 19 ನವಿಲುಗಳ ನಿಗೂಢ ಸಾವು ಸೇರ್ಪಡೆಯಾಗಿದೆ. ಈ ಘಟನೆ ಈಗ ರಾಜ್ಯದ ಜನರಲ್ಲಿ ಆಕ್ರೋಶ ಮತ್ತು ಆತಂಕ ಮೂಡಿಸಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕೆರೆ ಕೋಡಿ ನೀರಿನ ಪಕ್ಕದ ಜಮೀನಿನಲ್ಲಿ 19 ನವಿಲುಗಳ ಮೃತದೇಹಗಳು ಪತ್ತೆಯಾಗಿವೆ. ಈ ಪೈಕಿ 5 ಗಂಡು ಮತ್ತು 14 ಹೆಣ್ಣು ನವಿಲುಗಳು ಇದ್ದವು. ಈ ನವಿಲುಗಳು ಒಂದೇ ರಾತ್ರಿ, ಒಟ್ಟಾಗಿ ಸಾವನ್ನಪ್ಪಿವೆ ಎನ್ನಲಾಗಿದೆ. ಬೆಳಗ್ಗೆ ಜಮೀನಿಗೆ ಹೋದ ರೈತರು ನವಿಲುಗಳ ಮೃತದೇಹಗಳನ್ನು ಕಂಡು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಸದ್ಯ ಈ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ಆದರೆ, ಸ್ಥಳೀಯರ ಅನುಮಾನ ಮತ್ತು ಪ್ರಾಥಮಿಕ ಮಾಹಿತಿಯಂತೆ ಈ ನವಿಲುಗಳು ಕ್ರಿಮಿನಾಶಕ ಸಿಂಪಡಣೆ ಮಾಡಿರುವ ಬೆಳೆಗಳನ್ನು ಸೇವಿಸಿ ಸಾವನ್ನಪ್ಪಿರಬಹುದು ಎಂಬ ಶಂಕೆ ಇದೆ. ಅಥವಾ ಕಿದಿಗೇಡಿಗಳ ಕರಾಳ ಕೃತ್ಯವಿರಬಹುದು ಎಂಬ ಭಯವೂ ವ್ಯಕ್ತವಾಗಿದೆ

ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನವಿಲುಗಳ ಶವಗಳನ್ನು FSL ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಅಧಿಕಾರಿಗಳು ನ್ಯಾಯಾಧೀಶರ ಅನುಮತಿ ಪಡೆದು, ತಪಾಸಣೆ ಮುಂದುವರಿಸಿದ್ದಾರೆ.

ಇತ್ತೀಚೆಗೆ ಚಾಮರಾಜನಗರದ ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಹತ್ಯೆ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಹುಲಿಗಳನ್ನ ಕೊಂದ ಮೂವರನ್ನು ಪೊಲೀಸರು ಬಂಧಿಸಿದ್ದರು. ಅಷ್ಟೇ ಅಲ್ಲದೆ ಹುಲಿಗಳ ಹತ್ಯೆಗೆ ‘ಕಾರ್ಬೋಫ್ಯುರಾನ್​ ಕೀಟನಾಶಕ’ ಬಳಕೆ ಮಾಡಿರುವುದು ವರದಿಯಲ್ಲಿ ದೃಢ ಪಟ್ಟಿತ್ತು.

ಐದು ಹುಲಿಗಳ ಹತ್ಯೆ ಪ್ರಕರಣ ಮಾಸುವ ಮುನ್ನವೇ ಗಡಿನಾಡು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ಹೊರವಲಯದಲ್ಲಿ ಬರೋಬ್ಭರಿ 18 ಕೋತಿಗಳ ಶವ ಪತ್ತೆ ಆಗಿತ್ತು. ಕಿಡಿಗೇಡಿಗಳು ವಿಷ ಹಾಕಿದ್ದರು. ವಿಷ ಸೇವಿಸಿ ನಿತ್ರಾಣವಾದ ವಾನರ ಸೇನೆಯನ್ನ ಗೋಣಿ ಚೀಲದಲ್ಲಿ ತುಂಬಿಕೊಂಡು ಬಂದು ಕಂದೇಗಾಲ ಗ್ರಾಮದ ಹೊರ ವಲಯದಲ್ಲಿ ಬಿಸಾಡಿ ಹೋಗಿದ್ದರು. ಈ ಎರಡು ಪ್ರಕರಣಗಳು ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು. ಆದರೆ ಈಗ, ನವಿಲುಗಳ ನಿಗೂಢ ಸಾವು ಕೂಡ ಈ ಸರಣಿಗೆ ಹೊಸ ಕಪ್ಪು ಅಧ್ಯಾಯ ಸೇರಿಸುವಂತಾಗಿದೆ.

- Advertisement -

Latest Posts

Don't Miss