Thursday, July 10, 2025

Latest Posts

ವೋಟು ಕೊಟ್ಟವರನ್ನ ರಕ್ಷಿಸದ ನೀವು, ಇತರೆ ಕೋಮುಗಳ ಮೇಲೆ ವಿಷ ಕಕ್ಕುತ್ತಿದ್ದೀರಿ ; ಸಿಎಂ ವಿರುದ್ಧ ದಳಪತಿ ಆಕ್ರೋಶ..!

- Advertisement -

ಬೆಂಗಳೂರು : ಕರಾವಳಿ ಪ್ರದೇಶ ಮಂಗಳೂರಿನಲ್ಲಿ ನಡೆಯುತ್ತಿರುವ ಸಾಲು ಸಾಲು ಹತ್ಯೆಗಳನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ಆರೋಪವನ್ನು ವಿಪಕ್ಷಗಳು ಮಾಡುತ್ತಿವೆ. ಕಳೆದ ತಿಂಗಳಷ್ಟೆ ಹಿಂದೂಪರ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆಯಾಗಿತ್ತು. ಬಳಿಕ ಈ ಸಮಯದಲ್ಲಿ ಮುಸ್ಲಿಂ ಸಮುದಾಯದ ಅಬ್ದುಲ್‌ ರಹೀಂ ಹತ್ಯೆಯಾಗಿದ್ದು, ಗೃಹ ಇಲಾಖೆಯು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲೂ ವಿಫಲತೆ ಕಂಡಿದೆ ಎಂಬ ಆಕ್ರೋಶದಲ್ಲಿಯೇ ಮುಸ್ಲಿಂ ಸಮುದಾಯದ ಮುಖಂಡರು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನೂ ಈ ಎಲ್ಲದರ ನಡುವೆ ಕೇಂದ್ರ ಸಚಿವ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೂರಾಬಟ್ಟೆಯಾಗಿರುವ ಅವರ ಬದುಕಿನ ರಕ್ಷಣೆಗೆ ಸರಕಾರದ ಕ್ರಮವೇನು..?

ಕರಾವಳಿ ಭಾಗ ಸೇರಿ ರಾಜ್ಯದ ಉದ್ದಗಲಕ್ಕೂ ನಿರಂತರ ಧಾರಾಕಾರ ಮಳೆ ಜನಜೀವನವನ್ನು ಛಿದ್ರಗೊಳಿಸಿದೆ. ಜನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕರಾವಳಿಗರ ಕಣ್ಣೀರನ್ನು ಒರೆಸುವ ಬದಲಿಗೆ ಸರ್ಕಾರ ಕಣ್ಣಲ್ಲಿ ರಕ್ತ ಕಣ್ಣೀರು ಸುರಿಯಲಿ ಎಂದು ಹಪಾಪಿಸುತ್ತಿದೆ. ಮನೆ, ರಸ್ತೆ, ಸೇತುವೆಗಳು ಕುಸಿದಿವೆ. ನಗರ, ಪಟ್ಟಣ, ಹಳ್ಳಿಗಳು ಜಲದಿಗ್ಬಂಧನಕ್ಕೆ ಸಿಲುಕಿ ಜನ ವಿಲವಿಲವೆನ್ನುತ್ತಿದ್ದಾರೆ. ಮೂರಾಬಟ್ಟೆಯಾಗಿರುವ ಅವರ ಬದುಕಿನ ರಕ್ಷಣೆಗೆ ಸರಕಾರದ ಕ್ರಮವೇನು? ಎಂದು ಪ್ರಶ್ನಿಸಿದ್ದಾರೆ.

ಮಳೆ ಬರುವ ಮೊದಲು ಏನು ಮಾಡಿದ್ದೀರಿ?..

ಕೋಟೆ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಬಡಿದುಕೊಂಡರು ಎನ್ನುವಂತೆ ಮಳೆಯಲ್ಲಿ ಬದುಕು ಕೊಚ್ಚಿಹೋದ ಮೇಲೆ ಸಚಿವರಿಗೆ ಹೋಗಿ ಎಂದು ಮುಖ್ಯಮಂತ್ರಿ ಅಪ್ಪಣೆ ಕೊಟ್ಟರೆ ಫಲವೇನು? ಮಳೆ ಬರುವ ಮೊದಲು ಏನು ಮಾಡಿದ್ದೀರಿ? ಇದೇನಾ ಜನಪರ ಆಡಳಿತ? ನುಡಿದಂತೆ ನಡೆಯುವುದು ಎಂದರೆ ಹೀಗೆನಾ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕರಾವಳಿ ಮಳೆ ಬಗ್ಗೆ ಚಿಂತೆ ಇಲ್ಲ. ಆದರೆ, ಕರಾವಳಿ ಕೊಲೆಗಳ ಬಗ್ಗೆ ಎಲ್ಲಿಲ್ಲದ ಕಾಳಜಿ..

ಕಾಂಗ್ರೆಸ್ ಸರಕಾರಕ್ಕೆ ಕರಾವಳಿ ಮಳೆ ಬಗ್ಗೆ ಚಿಂತೆ ಇಲ್ಲ. ಆದರೆ, ಕರಾವಳಿ ಕೊಲೆಗಳ ಬಗ್ಗೆ ಎಲ್ಲಿಲ್ಲದ ಕಾಳಜಿ. ಆ ಕಾಳಜಿ ಕೊಲೆಗಳನ್ನು ಹತ್ತಿಕ್ಕಲಿಕ್ಕಲ್ಲ, ಕೊಲೆಗಳಲ್ಲೂ ‘ರಾಜಕೀಯ ಕೂಳು’ ಬೇಯಿಸಿಕೊಳ್ಳಲು! ಸಿದ್ದರಾಮಯ್ಯನವರೇ, ಎರಡು ವರ್ಷದಿಂದ ಅಧಿಕಾರದಲ್ಲಿದ್ದೀರಿ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅನ್ಯಪಕ್ಷಗಳನ್ನು ದೂರುತ್ತಾ ಕಾಲಹರಣ ಮಾಡುತ್ತಿದ್ದೀರಿ. ನೀವು ಅಧಿಕಾರಕ್ಕೆ ಬಂದ ಮೇಲೆ ಕರಾವಳಿ ಭಾಗದಲ್ಲಿ ಎಷ್ಟು ಹತ್ಯೆಗಳಾದವು? ಅವನ್ನು ಹತ್ತಿಕ್ಕಲಿಲ್ಲ ಯಾಕೆ? ಒಂದು ಸಮುದಾಯ ನಿಮ್ಮ ಪಕ್ಷಕ್ಕೆ ನೂರಕ್ಕೆ ನೂರರಷ್ಟು ವೋಟು ಕೊಟ್ಟಿದೆಯಲ್ಲವೇ? ಅವರನ್ನು ರಕ್ಷಿಸಲು ವಿಫಲರಾಗಿರುವ ನೀವು, ಇತರೆ ಕೋಮುಗಳ ಮೇಲೆ ವಿಷ ಕಕ್ಕುತ್ತಿದ್ದೀರಿ!! ಎಂದು ಕಿಡಿ ಕಾರಿದ್ದಾರೆ.

ನೀವೂ ಮತ್ತು ನಿಮ್ಮ ಸಂಗಡಿಗರ ಸದಾರಮೆ ಸಾಕು..

ಸರ್ವ ಜನಾಂಗದ ಶಾಂತಿಯ ತೋಟವನ್ನು ವಿಷ ಸರ್ಪಗಳ ತೋಟವನ್ನಾಗಿ ಪರಿವರ್ತಿಸಿದ್ದೀರಿ! ಸಿದ್ದರಾಮಯ್ಯನವರೇ, ನೀವೂ ಮತ್ತು ನಿಮ್ಮ ಸಂಗಡಿಗರ ಸದಾರಮೆ ಸಾಕು. ಕೂಡಲೇ ಕರಾವಳಿಗೆ ಭೇಟಿ ನೀಡಿ. ಮಳೆ, ಕೊಲೆಗಳಿಂದ ತತ್ತರಿಸಿರುವ ಅಲ್ಲಿನ ಜನತೆಗೆ ಧೈರ್ಯ ತುಂಬಿ. ಪ್ರಕೃತಿ ಪ್ರೇರಿತ ಮಳೆ ವಿಕೋಪ, ನಿಮ್ಮ ಪಕ್ಷ ಪ್ರೇಷಿತ ‘ಕೊಲೆ ವಿಕೋಪ’ಕ್ಕೆ ಪರಿಹಾರ ಕಂಡುಕೊಳ್ಳಿ. ಮುಖ್ಯಮಂತ್ರಿಯಾಗಿ ಇದು ನಿಮ್ಮ ತಕ್ಷಣದ ಕರ್ತವ್ಯ ಎಂದು ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ವಿರುದ್ದ ತಮ್ಮ ಟ್ವೀಟ್ಟರ್‌ ಪೋಸ್ಟ್‌ನಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss