ನವೆಂಬರ್ 20ರ ನಂತರ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಏನಾಗಲಿದೆ. ಯಾವೆಲ್ಲಾ ಬದಲಾವಣೆ ಸಂಭವಿಸಲಿದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರಾ? ಸಚಿವ ಸಂಪುಟ ವಿಸ್ತರಣೆಯಾಗುತ್ತಾ? ಅಥವಾ ನಾಯಕತ್ವ ಬದಲಾವಣೆಯಾಗಿ, ಹೊಸ ಸಿಎಂ ಬರ್ತಾರಾ? ಹೀಗೆ ಹತ್ತಾರು ಪ್ರಶ್ನೆಗಳು ಒಮ್ಮೆಲೆ ಹುಟ್ಟಿಕೊಳ್ಳುತ್ತಿವೆ. ಇದಕ್ಕೆಲ್ಲಾ ಕಾರಣವಾಗಿದ್ದು, ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಶಾಸಕ ಸುರೇಶ್ ಗೌಡ ಅವರ ಮಾತುಕತೆ.
ತುಮಕೂರಿನ ಬಾರ್ ಲೇನ್ನಲ್ಲಿ ನೂತನ ಪೊಲೀಸ್ ವಸತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಗೃಹ ಸಚಿವ ಪರಮೇಶ್ವರ್, ಶಾಸಕ ಸುರೇಶ್ ಗೌಡ, ಟಿ.ಬಿ. ಜಯಚಂದ್ರ ಸೇರಿದಂತೆ, ಕೆಲವು ಸ್ಥಳೀಯ ನಾಯಕರು ಭಾಗಿಯಾಗಿದ್ರು.
ಡಾ.ಜಿ ಪರಮೇಶ್ವರ್, ನೂತನ ವಸತಿ ಗೃಹಗಳ ಶಿಲಾನ್ಯಾಸ ಉದ್ಘಾಟನೆ ಮಾಡಿದ್ರು. ಈ ವೇಳೆ ಏನ್ ಸರ್. ಖಾತೆ ಏನಾದ್ರೂ ಚೇಂಜ್ ಆಗುತ್ತಾ? ನವೆಂಬರ್ 20 ಆದ್ಮೇಲೆ. ಸ್ಪೀಡಾಗಿ ಇವೆಲ್ಲಾ ಮಾಡಿಸುತ್ತಿದ್ದೀರಲ್ಲ. ಖಾತೆ ಏನಾದ್ರೂ ಇನ್ನೂ ಒಳ್ಳೆಯದು ಬರುತ್ತೆ ಎಂಬುದಕ್ಕಾ ಅಂತಾ ಶಾಸಕ ಸುರೇಶ್ ಗೌಡ ಹಾಸ್ಯಮಯವಾಗೇ ಕಾಲೆಳೆದಿದ್ದಾರೆ.
ಇದಕ್ಕೆ ಪರಂ ಕೂಡ ನಗುತ್ತಲೇ ಪ್ರತಿಕ್ರಿಯಿಸಿದ್ದು, ಅಲ್ಲಪ್ಪಾ.. ನಿಮ್ಮ ಸಹವಾಸ ಹೇಗಿದೆ ಅಂದ್ರೆ, ಬೇಗ ಮಾಡಿದ್ರೂ ಕಷ್ಟ ನಿಮ್ ಹತ್ರ. ನಿಧಾನ ಮಾಡಿದ್ರೂ ಕಷ್ಟ ಎಂದು ತಿರುಗೇಟು ಕೊಟ್ಟಿದ್ದಾರೆ. ಪರಮೇಶ್ವರ್ ಹಾಗೂ ಸುರೇಶ್ ಗೌಡ ಮಾತುಕತೆಗೆ ಉಳಿದ ನಾಯಕರು, ಅಧಿಕಾರಿಗಳು ನಕ್ಕು ನುಕ್ಕು ಸುಸ್ತಾಗಿದ್ದಾರೆ.
ಈ ಇಬ್ಬರೂ ಜನಪ್ರತಿನಿಧಿಗಳ ಮಾತುಕತೆ ಕೇಳಿದ್ರೆ, ನವೆಂಬರ್ ಮುಗಿಯೋದ್ರೊಳಗೆ, ರಾಜ್ಯ ರಾಜಕೀಯದಲ್ಲಿ ಮಹಾಪ್ರಳಯದ ಮುನ್ಸೂಚನೆ ಸಿಕ್ತಿದೆ.




