www.karnatakatv.net : ತುಮಕೂರು: ಜಿಲ್ಲೆಯಲ್ಲಿ 6 ಸಾವಿರಕ್ಕೂ ಅಧಿಕ ಮಕ್ಕಳಿಗೆ ಪೌಷ್ಠಿಕ ಆಹಾರದ ಕೊರತೆ ಇದ್ದು, ಇದರಿಂದ ಅವರ ಬೆಳವಣಿಗೆಯಲ್ಲಿ ಕುಂಠಿತವಾಗಿದೆ. ಪರಿಣಾಮ ಯಾವಾಗಬೇಕಾದರೂ ಕೋವಿಡ್ ಸೋಂಕು ತಗುಲಬಹುದು. ಇಂತಹ ಮಕ್ಕಳಿಗೆ ನಾವು ಆದಷ್ಟು ಕಾಳಜಿ ವಹಿಸಿ ಆರೋಗ್ಯ ಕಾಪಾಡಬೇಕಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದ್ದಾರೆ.
ತುಮಕೂರು ತಾಲೂಕಿನ ದೇವರಾಯಪಟ್ಟಣ ಗ್ರಾಮ ಬೆಳಗುಂಬ ರಸ್ತೆಯಲ್ಲಿರುವ ದ ಸ್ಟಾಂರ್ಡ್ವ ಬ್ರಿಕ್ ಅಂಡ್ ಟೈಲ್ ಕಂಪನಿ ಆವರಣದಲ್ಲಿ ಜಿಲ್ಲಾ ಪಂಚಾಯತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರೋಟರಿ ಕ್ಲಬ್, ದ ಸ್ಟಾಂರ್ಡ್ ಬ್ರಿಕ್ ಅಂಡ್ ಟೈಲ್ ಕಂಪನಿ ಹಾಗೂ ಎಂಎಎಫ್ ಕ್ಲೋಥಿಂಗ್ ಪ್ರೈ.ಲಿಮಿಟೆಡ್‌ನ ಸಹಯೋಗದಲ್ಲಿ ವ್ಹೀಲ್ ಚೇರ್ ವಿತರಣಾ ಕಾರ್ಯಕ್ರಮ ನಡೆಯಿತು. ಸರ್ಕಾರಿ ಶಾಲೆಯ 50 ಮಂದಿ ವಿಕಲಚೇತನ ಫಲಾನುಭವಿಗಳಿಗೆ ವ್ಹೀಲ್ ಚೇರ್ ವಿತರಿಸಿ ಮಾತನಾಡಿದ ಸಚಿವ ಮಾಧುಸ್ವಾಮಿ, ಪೌಷ್ಠಿಕಾಂಶ ಆಹಾರದ ಕೊರತೆಯಿಂದ ಮಕ್ಕಳು ಇಂದು ಅಂಗವೈಕಲ್ಯತೆಗೆ ಒಳಗಾಗುತಿದ್ದಾರೆ, ಒಳ್ಳೆಯ ಪೌಷ್ಠಿಕ ಆಹಾರ ಕೊಡುವ ಕಾರ್ಯವನ್ನು ರೋಟರಿ ಕ್ಲಬ್‌ನವರು ಮಾಡಬೇಕಾಗುತ್ತದೆ ಇಂತಹ ಮಕ್ಕಳಿಗೆ ನ್ಯೂಟ್ರಿಷಿಯನ್ ಆಹಾರ ನೀಡಿದರೆ ಭೌತಿಕವಾಗಿ ಉತ್ತಮವಾಗಿ ಬೆಳೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಅಂಗವಿಕಲ ಒಂದು ವೈಫಲ್ಯ ಅಥವಾ ಒಂದು ಶಾಪ ಎಂದು ಭಾವಿಸುವುದೇ ಬೇಡಿ. ಅಗವಿಕಲತೆಯಿಂದ ಕೊರಗದೇ ಆ ಮಕ್ಕಳು ಎಲ್ಲರ ಜೊತೆ ಬೆರೆಯಬೇಕು. ಆ ನಿಟ್ಟಿನಲ್ಲಿ ಅವರಿಗೆ ಆತ್ಮವಿಶ್ವಾಸವನ್ನು ತುಂಬುವ ಕೆಲಸವಾಗಬೇಕು. ಬರೀ ಅನುಕಂಪ ತೋರಿಸಿದರೆ ಸಾಲದು ಅವರು ತಮ್ಮ ಬದುಕಿನಲ್ಲಿ ನೆಲೆ ನಿಲ್ಲುವುದಕ್ಕೆ ಪೂರಕವಾದ ವಾತಾವರಣ ಕಲ್ಪಿಸಬೇಕಾಗಿದೆ. ರೋಟರಿ ಕ್ಲಬ್ ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನ ಮಾಡುತ್ತಾ ಬಂದಿದೆ. ಇಂದು ತುಮಕೂರಿನ 50 ಮಂದಿ ವಿಕಲಚೇತನರಿಗೆ ವ್ಹೀಲ್ ಚೇರ್‌ಗಳನ್ನು ಕೊಡುಗೆಯಾಗಿ ನೀಡಿದೆ. ರೋಟರಿ ಕ್ಲಬ್ ವತಿಯಿಂದ ಆರೋಗ್ಯ ಶಿಬಿರಗಳು, ಪರಿಸರ, ಕೋವಿಡ್ ಸಂದರ್ಭದಲ್ಲಿ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ರೋಟರಿ ಕ್ಲಬ್ ಸೇವಾ ನಿರತ ಸಂಸ್ಥೆಯಾಗಿದೆ.
ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ 50 ವಿಕಲಚೇತನ ಫಲಾನುಭವಿಗಳಿಗೆ ವ್ಹೀಲ್ ಚೇರ್‌ಗಳನ್ನು ಬೆಂಗಳೂರು ರೋಟರಿ ಕ್ಲಬ್ ವತಿಯಿಂದ ವಿತರಿಸಲಾಯಿತು. ಈ ವೇಳೆ ತುಮಕೂರು ಉಪಕುಲಪತಿ ಪ್ರೊ.ವೈ.ಎಸ್. ಸಿದ್ಧೇಗೌಡ, ರೋಟರಿ ಬಿಲ್ವಪ್ರಿಯ ಬೆಳ್ಳಾವಿ ಅಧ್ಯಕ್ಷ ಕೆ.ಜೆ.ಪ್ರಸಾದ್, ರೋಟರಿ ತುಮಕೂರು ಅಧ್ಯಕ್ಷ ಎ.ಎಸ್.ಬಸವರಾಜ್ ಹಿರೇಮಠ್, ಡಿಡಿಪಿಐ ನಂಜಯ್ಯ, ರೋಟರಿ ಸಂಸ್ಥೆಯ ಎಸ್.ಎಲ್.ಕಾಡದೇವರಮಠ್, ಉಮೇಶ್, ಟಿ.ಆರ್.ಸದಾಶಿವಯ್ಯ, ಮಲ್ಲಸಂದ್ರ ಶಿವಣ್ಣ, ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ -ತುಮಕೂರು