9 ಜನರ ಸಾವಿಗೆ ಕಾರಣನಾದ ಟ್ರಕ್ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಾಸನದ ಮೊಸಳೆ ಹೊಸಹಳ್ಳಿ ಬಳಿ ಸೆಪ್ಟೆಂಬರ್ 12ರ ರಾತ್ರಿ ಘೋರ ದುರಂತ ಸಂಭವಿಸಿತ್ತು. ಟ್ರಕ್ ಚಾಲಕ ಭುವನೇಶ್ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎನ್ನಲಾಗ್ತಿದೆ. ಈಗ ಆರೋಪಿ ಭುವನೇಶ್ ವಿರುದ್ಧ, ಡನಾಯಕನಹಳ್ಳಿ ಕೊಪ್ಪಲು ನಿವಾಸಿ ಮೃತ ಈಶ್ವರ್ ಚಿಕ್ಕಪ್ಪ ಮಂಜೇಗೌಡ್ರು ದೂರು ನೀಡಿದ್ದಾರೆ. ದೂರು ಆಧರಿಸಿ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದುವರೆಗೆ ಭುವನೇಶ್ ಎಲ್ಲಿದ್ದಾನೆ ಅನ್ನೋ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಅಪಘಾತದಲ್ಲಿ ಭುವನೇಶ್ ಗಾಯಗೊಂಡಿದ್ರು. ಬಳಿಕ ಸ್ಥಳೀಯರು ಸೇರಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ರು. ಗಂಭೀರವಾಗಿ ಗಾಯಗೊಂಡಿರುವ ಭುವನೇಶ್‌ನನ್ನ, ಸ್ಥಳೀಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗ್ತಿದೆ. ಆದ್ರೆ ಯಾವ ಆಸ್ಪತ್ರೆ ಅನ್ನೋದನ್ನ ಬಹಿರಂಗಪಡಿಸಿಲ್ಲ. ಪೊಲೀಸರು ಭುವನೇಶ್ ವಿಚಾರದಲ್ಲಿ ಗೌಪ್ಯತೆ ಕಾಯ್ದುಕೊಂಡಿದ್ದಾರೆ.
ಮತ್ತೊಂದೆಡೆ, ಮೃತರ ಕುಟುಂಬಸ್ಥರಿಗೆ ಘೋಷಿಸಿರುವ ಪರಿಹಾರಕ್ಕೂ, ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಬೆಂಗಳೂರು ಕಾಲ್ತುಳಿತದಲ್ಲಿ ಸತ್ತವರಿಗೆ 50 ಲಕ್ಷ ಕೊಟ್ಟಿದ್ದಾರೆ. ರೈತರು, ಬಡವರು ಮಕ್ಕಳು ಸತ್ರೆ, ಬರೀ 5 ಲಕ್ಷ ಘೋಷಿಸಿದ್ದಾರೆ ಅಂತಾ, ಹಾಸನ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದುರಂತ ನಡೆದದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ. ಆದ್ರೆ ರಸ್ತೆ ಚಿಕ್ಕದ್ದಾಗಿದೆಯಂತೆ. ಹಂಪ್ಸ್‌ಗಳನ್ನೂ ಹಾಕಿಲ್ವಂತೆ. 3 ವರ್ಷಗಳಿಂದ ಹಲವು ಬಾರಿ ಡಿವೈಎಸ್‌ಪಿ ಸೇರಿದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದ್ರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಿಸಿದ್ದು, ನಮ್ಮ ವ್ಯಾಪ್ತಿಗೆ ಬರೋದಿಲ್ಲವೆಂದು ಹೇಳಿ ಸುಮ್ಮನಾಗ್ತಾರೆ. ಹಂಪ್ಸ್ ಇದ್ದಿದ್ರೆ ವೇಗ ನಿಯಂತ್ರಣ ಮಾಡಬಹುದಿತ್ತು ಅಂತಾ, ಸ್ಥಳೀಯರು ಕಿಡಿಕಾರಿದ್ದಾರೆ.