ಚಿತ್ರದುರ್ಗದ ಮುರುಘಾಶ್ರೀ ಬಿಡುಗಡೆಯೋ, ಬಂಧನವೋ ಅನ್ನೋದು ಇಂದು ನಿರ್ಧಾರ ಆಗಲಿದೆ. ಪೋಕ್ಸೋ ಕೇಸ್ ಅಂತಿಮಘಟ್ಟಕ್ಕೆ ಬಂದು ತಲುಪಿದ್ದು, ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯದಲ್ಲಿ ತೀರ್ಪು ಹೊರಬೀಳಲಿದೆ. ಹೀಗಾಗಿ ಮುರುಘಾಶ್ರೀ ಸೇರಿದಂತೆ ಬೆಂಬಲಿಗರು ಹಾಗೂ ಭಕ್ತರಲ್ಲಿ ಟೆನ್ಶನ್ ಶುರುವಾಗಿದೆ. ಹಾಗೆಯೇ ಸಂತ್ರಸ್ತೆಯರ ಕುಟುಂಬದಲ್ಲೂ ಆತಂಕ ಮನೆ ಮಾಡಿದ್ದು, ಎಲ್ಲರಚಿತ್ತ ನ್ಯಾಯಾಲಯದ ತೀರ್ಪಿನತ್ತ ನೆಟ್ಟಿದೆ.
2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರಿಂದ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎ1 ಮುರುಘಾಶ್ರೀ, ಎ2 ಲೇಡಿ ವಾರ್ಡನ್ ರಶ್ಮಿ, ಎ3 ಬಸವಾದಿತ್ಯ, ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರಯ್ಯ ವಿರುದ್ಧ ಕೇಸ್ ದಾಖಲಾಗಿತ್ತು. ಸತತ 3 ವರ್ಷಗಳ ಕಾಲ ಪೋಕ್ಸೊ ಕೇಸ್ ವಿಚಾರಣೆ ನಡೆಸಲಾಗಿತ್ತು.
ಅದೇ ವರ್ಷ ಆಗಸ್ಟ್ 27ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆಯಾಗಿತ್ತು. 2022ರ ಸೆಪ್ಟೆಬರ್ 01ರಂದು ಎ1 ಮುರುಘಾಶ್ರೀ, ಎ2 ವಾರ್ಡನ್ ರಶ್ಮಿ ಬಂಧನಕ್ಕೊಳಗಾಗಿದ್ದರು. ಇನ್ನು, ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಮುರುಘಾಶ್ರೀ ವಿರುದ್ಧ ಮಠದ ಅಡುಗೆ ಸಹಾಯಕಿಯಿಂದ ಮತ್ತೊಂದು ದೂರು ದಾಖಲಾಗಿತ್ತು. ಆ ಕೇಸಲ್ಲಿ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆಯೂ, ಲೈಂಗಿಕ ಕಿರುಕುಳ ನೀಡಿರುವುದಾಗಿಯೂ ಉಲ್ಲೇಖಿಸಿದ್ದರು.
ಆಗ ಸಂತ್ರಸ್ತೆಯರು ಮುರುಘಾಶ್ರೀಗಳ ಜಾಮೀನು ರದ್ದತಿ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋದ ಹಿನ್ನೆಲೆ, ಮುಖ್ಯ ಸಾಕ್ಷ ವಿಚಾರಣೆ ಪೂರ್ಣ ಆಗುವವರೆಗೆ ಮುರುಘಾಶ್ರೀ ಬಂಧನದಲ್ಲಿಡುವಂತೆ ಸುಪ್ರಿಂ ಕೋರ್ಟ್ ಆದೇಶ ಮಾಡಿತ್ತು. ಹೀಗಾಗಿ 2024ರ ಮೇ 27ರಂದು ಕೋರ್ಟ್ ಎದುರು ಶರಣಾದ ಮುರುಘಾಶ್ರೀಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶಿಸಿತ್ತು. ಬಳಿಕ ಸಂತ್ರಸ್ತೆಯರಿಬ್ಬರು ಸೇರಿದಂತೆ 13 ಜನರ ಸಾಕ್ಷ ವಿಚಾರಣೆ ಅಂತ್ಯ ಹಿನ್ನೆಲೆ, ಮುರುಘಾಶ್ರೀಗೆ ಬಿಡುಗಡೆ ಭಾಗ್ಯ ಸಿಕ್ಕಿತ್ತು.

