Wednesday, December 3, 2025

Latest Posts

ರಾಜ್ಯದ ಯಾವ ಜಿಲ್ಲೆಗಳಿಗಿದೆ ‘ದಿತ್ವಾ ಸೈಕ್ಲೋನ್’ ಎಫೆಕ್ಟ್!

- Advertisement -

ಬಂಗಾಳ ಕೊಲ್ಲಿಯಲ್ಲಿ ಚೆನ್ನೈನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿ ರೂಪುಗೊಂಡಿದ್ದ ದಿತ್ವಾ ಚಂಡಮಾರುತವು ಪ್ರಸ್ತುತ ದುರ್ಬಲಗೊಂಡು ‘ಡೀಪ್ ಡಿಪ್ರೆಶನ್’ ಆಗಿ ಪರಿವರ್ತನೆಗೊಂಡಿದೆ. ಇದರಿಂದ ಕರ್ನಾಟಕದ ಮೇಲೆ ಗಂಭೀರವಾದ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಕರ್ನಾಟಕ ಹವಾಮಾನ ಇಲಾಖೆ ತಿಳಿಸಿದೆ.

ಡಿಸೆಂಬರ್ 1ರಿಂದ 4ರವರೆಗೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇರುವುದಾಗಿ ಹೇಳಿದೆ.

ಕಳೆದ ನಾಲ್ಕೈದು ದಿನಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಗಣನೀಯ ಇಳಿಕೆಯಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 21 ಡಿಗ್ರಿ ಸೆಂಟಿಗ್ರೇಡ್ ಮಟ್ಟಕ್ಕೆ ಕುಸಿದಿದೆ. ಹಗಲಿನಲ್ಲಿ ಈ ಮಟ್ಟದ ತಾಪಮಾನ ಕುಸಿತ ಅಪರೂಪವೆಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಬೆಂಗಳೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ರಾತ್ರಿ–ಹಗಲಿನ ತಾಪಮಾನ ವ್ಯತ್ಯಾಸ ಕೇವಲ 2–3 ಡಿಗ್ರಿಗಳಷ್ಟೇ ದಾಖಲಾಗಿರುವುದು ಚಳಿಯ ಅನುಭವವನ್ನು ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಇಂದಿನಿಂದ ಡಿಸೆಂಬರ್ 3ರವರೆಗೆ ಚಳಿಯ ವಾತಾವರಣ ಮುಂದುವರಿಯಲಿದ್ದು, ನಂತರ ಬಿಸಿಲು ಮೂಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss