ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ವಾರದಲ್ಲಿ ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಮುಂದೆ ಬಂದು ಐದು ವರ್ಷ ನಾನೇ ಸಿಎಂ ಎಂದು ಘೋಷಿಸಿದ್ದರು. ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯ ವೇಳೆ ಅವರ ಈ ಹೇಳಿಕೆಗೆ ಸಾಕಷ್ಟು ಮಹತ್ವ ಬಂದಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಡಿಕೆ ಶಿವಕುಮಾರ್ ಮೌನಕ್ಕೆ ಶರಣಾಗಿದ್ದಾರೆ.
ಆದರೆ ರಾಜ್ಯದಲ್ಲಿ ನಂದಿಬೆಟ್ಟದ ಸಚಿವ ಸಂಪುಟ ಸಭೆಯ ವೇಳೆ ನಾನೇ ಐದು ವರ್ಷ ಸಿಎಂ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಡಿಸಿಎಂ ಡಿಕೆಶಿಗೆ ಶಾಕ್ ನೀಡಿದ್ದರು. ಸಿಎಂ ಆಗುವ ಅವರ ಕನಸಿಗೆ ಎಳ್ಳು ನೀರು ಬಿಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದರು. ಆದರೆ ಇಲ್ಲಿ ಹೇಳಿದ್ದನ್ನೇ ರಾಷ್ಟ್ರ ಮಟ್ಟದಲ್ಲಿ ಹೇಳುವುದರಲ್ಲಿ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ದಿಲ್ಲಿಯ ಅಂಗಳದಲ್ಲಿ ಕುಳಿತು ಶಾಸಕರ ಬೆಂಬಲದ ಜೊತೆಗೆ ನಾನೇ ಸಿಎಂ ಎಂದು ಘಂಟಾಘೋಷವಾಗಿ ಹೇಳಿದ್ದರು.
ಆದರೆ ಸಿದ್ದರಾಮಯ್ಯ ಹೀಗೆ ಪದೇ ಪದೇ ನಾನೇ ಸಿಎಂ ಮುಂದುವರೆಯುತ್ತೇನೆ ಎಂದು ಹೇಳುವುದರ ಹಿಂದೆ ಒಬ್ಬ ಪ್ರಭಾವಿ ನಾಯಕನ ಸಪೋರ್ಟ್ ಇರುವುದು ತಿಳಿದು ಬಂದಿದೆ. ಎಐಸಿಸಿಯ ಪ್ರಮುಖ ಹುದ್ದೆಯಲ್ಲಿರುವ ಅದರಲ್ಲೂ ಗಾಂಧಿ ಕುಟುಂಬಕ್ಕೆ ಬೇಕಾಗಿರುವ ಪ್ರಮುಖ ಲೀಡರ್ ಕೃಪಾಕಟಾಕ್ಷ ಸಿದ್ದು ಮೇಲಿದೆ. ಅವರ ಅಣತಿಯಂತೆಯೇ ಸಿದ್ದರಾಮಯ್ಯ ದೆಹಲಿಯಲ್ಲಿ ಅಷ್ಟೊಂದು ಅಂಜಿಕೆ, ಅಳುಕು ಇಲ್ಲದೆ ದಿಢೀರ್ ಕ್ಯಾಮೆರಾಗಳ ಎದುರು ಬಂದು ಹೇಳಿರುವುದು ಮೂಲಗಳ ಮಾಹಿತಿಯಾಗಿದೆ.
ಇಲ್ಲಿ ಎಲ್ಲವೂ ಸರಿಯಾಗಿದೆ, ನಿಮ್ಮ ಬದಲಾವಣೆಯ ಬಗ್ಗೆ ಏನೂ ಚರ್ಚೆ ನಡೆದಿಲ್ಲ. ಸಿದ್ದರಾಮಯ್ಯ ಜೀ ನೀವು ಪ್ರೆಸ್‌ಮೀಟ್ ಮಾಡಿ. ಅದರಲ್ಲಿ ಐದು ವರ್ಷ ನಾನೇ ಸಿಎಂ, ಅಂತ ಹೇಳಿಬಿಡಿ, ಪವರ್ ಷೇರಿಂಗ್ ವಿಚಾರನೂ ಇಲ್ಲ. ಯಾವುದೇ ಚರ್ಚೆಯು ನಡೆದಿಲ್ಲ ಅಂತ ಅನೌನ್ಸ್ ಮಾಡಿ ಬಿಡಿ ಎಂದು ಸಿದ್ದರಾಮಯ್ಯ ಅವರಿಗೆ ಆ ಒಬ್ಬರು ಹೈ ಪ್ರೊಫೈಲ್ ವ್ಯಕ್ತ ಫೋನ್ ಕಾಲ್ ಮಾಡಿ ತಿಳಿಸಿದ್ದರಂತೆ. ಸಿದ್ದುಗೆ ಯಾವಾಗ ಆ ನಾಯಕನ ಬೆಂಬಲ, ಅಭಯ ದೊರಕಿತೋ… ಆಗಲೇ ಗಟ್ಟಿ ಧ್ವನಿಯಲ್ಲಿ ಯಾರಿಗೂ ಡೋಂಟ್ ಕೇರ್ ಮಾಡದೆಯೇ, ಯೋಚನೆಯಿಲ್ಲದ ಅನೌನ್ಸ್ ಮಾಡಿಯೇ ಬಿಟ್ಟರು. ಈ ಮೂಲಕ ಎಲ್ಲ ರಾಜಕೀಯ ಲೆಕ್ಕಾಚಾರಗಳು ಉಲ್ಟಾ ಆಗಿವೆ.
ಇನ್ನೂ ದೆಹಲಿಯ ಭೇಟಿಗೂ ಮುನ್ನ ಸ್ವಲ್ಪ ಗೊಂದಲದಲ್ಲಿದ್ದ ಸಿದ್ದರಾಮಯ್ಯ, ಅಲ್ಲಿ ಹೋದ ಬಳಿಕ ಅವರಿಗೆ ತಮ್ಮ ದಾರಿ ಸುಗಮವಾದಂತಾಗಿತ್ತು. ಇಂಟ್ರೆಸ್ಟಿಂಗ್ ವಿಚಾರವನ್ನು ನೋಡೋದಾದರೆ, ಸಿದ್ದರಾಮಯ್ಯ ಹೋಗುವ ಒಂದು ದಿನ ಮೊದಲು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ಹಾರಿದ್ದರು. ನೇರವಾಗಿ ಕೈ ನಾಯಕಿ ಸೋನಿಯಾ ಗಾಂಧಿ ಮನೆ ಬಾಗಿಲು ತಟ್ಟಿದ್ದರು. ಆದರೆ ಅನಾರೋಗ್ಯದಿಂದ ಅವರನ್ನು ಭೇಟಿಯಾಗಿರಲಿಲ್ಲ. ಬಳಿಕ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆಯನ್ನು ನಡೆಸಿದ್ದರು ಎಂಬ ಸಂಗತಿ ಬಯಲಾಗಿದೆ.
ಅಲ್ಲದೆ ರಾಜ್ಯದಲ್ಲಿನ ಕೈ ಪಾಳಯದ ಕುರ್ಚಿ ಕದನವನ್ನು ಗಮನಿಸುತ್ತಿರುವ ಎಐಸಿಸಿಯಲ್ಲೂ ಎರಡು ಬಣಗಳು ಇರುವ ಮಾಹಿತಿ ಲಭ್ಯವಾಗಿದೆ. ಸಿದ್ದರಾಮಯ್ಯ ಅವರು ಮುಂದುವರೆಯಲಿ ಎಂದು ಕೆಲ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಪರ ಕೆಲವರು ದೆಹಲಿಯಿಂದಲೇ ಬ್ಯಾಟ್ ಬೀಸುತ್ತಿದ್ದಾರೆ. ಹೀಗಾಗಿ ರಾಜ್ಯದಂತೆ ದೆಹಲಿ ಮಟ್ಟದಲ್ಲೂ ಬಣ ರಾಜಕೀಯ ನಡೆಯುತ್ತಿದೆ ಎನ್ನಲಾಗುತ್ತಿದೆ. ಅಂತಿಮವಾಗಿ ಎಐಸಿಸಿ ಮಟ್ಟದಲ್ಲೂ ಯಾರ ಕೈ ಮೇಲಾಗಲಿದೆ ಎನ್ನುವುದು ಸದ್ಯದ ಕುತೂಹಲವಾಗಿದೆ.