ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ, ಇನ್ನೂ ಎರಡೂವರೆ ವರ್ಷ ಬಾಕಿ ಇದೆ. ಈಗಿರುವಾಗಲೇ 2028ಕ್ಕೆ ಯಾವ ಪಕ್ಷ ಗದ್ದುಗೆ ಏರಲಿದೆ? ಯಾರು ಸಿಎಂ ಆಗ್ತಾರೆ? ಅನ್ನೋ ಚರ್ಚೆಗಳು ಶುರುವಾಗಿವೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಭವಿಷ್ಯವೊಂದನ್ನ ನುಡಿದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯವರೇ ಸಿಎಂ ಆಗ್ತಾರೆ ಅಂತಾ ಹೇಳಿದ್ದಾರೆ.
ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಅವರು ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಯತ್ನಾಳ್ ನನ್ನ ಆತ್ಮೀಯ ಸ್ನೇಹಿತರು. ಆದ್ರೀಗ ಪಕ್ಷದಲ್ಲಿ ಇಲ್ಲ. ಬರುವ ದಿನಗಳಲ್ಲಿ ಏನೇನು ಬದಲಾವಣೆ ಆಗುತ್ತದೆಯೋ ಗಮನಿಸಬೇಕಿದೆ. ತಾವೇ ಸಿಎಂ ಎನ್ನುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿರಬಹುದು ಅಷ್ಟೇ.
ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ಶಶಿಕಾತ್ ಸೆಂಥಿಲ್ ವಿರುದ್ಧವೂ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ. ಎಡಪಂಥೀಯ ಚಿಂತನೆಯ ಸೆಂಥಿಲ್, ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗಳನ್ನು, ನಾಶ ಮಾಡಲೆಂದೇ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ. ಕರಾವಳಿ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದೆ ಎಂಬ ಕಾರಣಕ್ಕಾಗಿಯೇ, ಧರ್ಮಸ್ಥಳ ಪ್ರಕರಣದಲ್ಲಿ ಹುನ್ನಾರ ನಡೆಸಿದ್ದಾರೆ. ಧರ್ಮಸ್ಥಳ ಪ್ರಕರಣದ ಸೂತ್ರಧಾರಿಯೇ ಸೆಂಥಿಲ್ ಅಂತಾ ಗಂಭೀರ ಆರೋಪ ಮಾಡಿದ್ದಾರೆ.
ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ಹೆಸರು ಹಾಳು ಮಾಡಲು, ಕಮ್ಯೂನಿಸ್ಟರು ಹಾಗೂ ನಗರ ನಕ್ಸಲರು ಹುನ್ನಾರ ನಡೆಸಿದ್ದಾರೆ. ಧರ್ಮಸ್ಥಳ ಪ್ರಕರಣದಲ್ಲಿ ಸೆಂಥಿಲ್ ಕೈವಾಡವಿದೆ ಎಂಬ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆಂದು ಗೊತ್ತಾಯಿತು. ಅವರ ಎಷ್ಟೇ ಮೊಕದ್ದಮೆ ದಾಖಲಿಸಲಿ. ನಾನೂ ಸಹ ಕಾನೂನು ಹೋರಾಟ ಮಾಡುವೆ. ಈ ಪ್ರಕರಣದಿಂದ ನಾನು ವಿಚಲಿತನಾಗುವುದಿಲ್ಲ. ಕಾನೂನು ಹೋರಾಟಕ್ಕೆ ಅವರೇ ದಾರಿ ಮಾಡಿಕೊಟ್ಟಿದ್ದಾರೆ ಅಂತಾ, ಜನಾರ್ದನ ರೆಡ್ಡಿ ಹೇಳಿದ್ದಾರೆ.



