ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಹಲವು ಬಾರಿ ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಇದೇ ಮೊದಲ ಬಾರಿ ತಮ್ಮ ನಿಲುವು ಬದಲಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಸೂಚಿಸಿದರೆ ಮುಂದುವರಿಯುತ್ತೇನೆ ಎಂದಿರುವುದು, ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೆ ಇನ್ನಷ್ಟು ತೀವ್ರತೆ ತಂದಿದೆ. ಎರಡೂವರೆ ವರ್ಷದ ಬಳಿಕ ನಾಯಕತ್ವ ಬದಲಾವಣೆ ಸಾಧ್ಯವೆಂಬ ಊಹಾಪೋಹಗಳು ಇದೀಗ ಮತ್ತಷ್ಟು ಬಲ ಪಡೆದಿವೆ.
ಮಾಜಿ ಸಂಸದ ಡಿ.ಕೆ. ಸುರೇಶ್ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೈಕಮಾಂಡ್ ತೀರ್ಮಾನ ಅಂತಿಮ, ನಾವು ಇಬ್ಬರೂ ಅದಕ್ಕೆ ಬದ್ಧ ಎಂದರು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವ ಪ್ರಶ್ನೆಗೆ, ಇದೇ ವಿಚಾರವನ್ನು ಮರುಮರು ಕೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಸಂಪುಟ ಪುನರ್‌ರಚನೆ ಬಗ್ಗೆ ಅವರು, 4-5 ತಿಂಗಳ ಹಿಂದೆ ಚರ್ಚಿಸಿದಾಗ ಹೈಕಮಾಂಡ್ ಸಮತಿ ನೀಡಿದ್ದರೂ, ಅದು ಎರಡೂವರೆ ವರ್ಷದ ಬಳಿಕ ಮಾಡುವ ನಿರ್ಧಾರವಾಗಿದ್ದುದಾಗಿ ಸ್ಪಷ್ಟಪಡಿಸಿದರು. ಈಗ ವರಿಷ್ಠರು ಹೇಳಿದರೆ ಸಂಪುಟ ಪುನರ್‌ರಚನೆ ಸಹ ಸಾಧ್ಯ ಎಂದು ತಿಳಿಸಿದರು.
ಇನ್ನೊಂದು ಕಡೆ, ಡಿ.ಕೆ. ಶಿವಕುಮಾರ್ ಬಣದ ಶಾಸಕರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಕಳೆದ ಕೆಲ ಬೆಳವಣಿಗೆಗಳು ಸಿದ್ದರಾಮಯ್ಯ ಅವರ ಆತ್ಮವಿಶ್ವಾಸ ಕುಗ್ಗಿದಂತೆ ರಾಜಕೀಯ ವಲಯದಲ್ಲಿ ಅಭಿಪ್ರಾಯ ಮೂಡಿಸಿದೆ.
ಡಿ.ಕೆ. ಶಿವಕುಮಾರ್ ತಮ್ಮದೇ ಕಾರ್ಯತಂತ್ರದಲ್ಲಿ ಮುಂದುವರಿದಿದ್ದು, ಮುಖ್ಯಮಂತ್ರಿಯಾಗಬೇಕೆಂಬ ಧೃಡ ನಿಲುವು ಹಿಡಿದಿದ್ದಾರೆ. ಇದರ ಪರಿಣಾಮ ಇಬ್ಬರ ನಡುವೆ ಮುಸುಕಿನ ಗುದ್ದಾಟ ಸ್ಪಷ್ಟವಾಗಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ನಿಂತರೂ, ಸಂವಹನ, ಆತ್ಮೀಯತೆ, ಮುಖಭಾವ—ಎಲ್ಲವೂ ತಣ್ಣಗಾಗಿದ್ದವು. ಇದಕ್ಕೂ ಮೊದಲು ಇಬ್ಬರೂ ಕಾರ್ಯಕ್ರಮಗಳಲ್ಲಿ ಸ್ನೇಹಭಾವದಿಂದ ಕಾಣಿಸಿಕೊಂಡಿದ್ದರೂ, ಇಂದಿನ ದೃಶ್ಯವು ಕಾಂಗ್ರೆಸ್‌ನ ಅಂತರದ ದ್ವಂದ್ವ, ನಾಯಕತ್ವ ಹೋರಾಟ ಮತ್ತು ಭವಿಷ್ಯದ ಬದಲಾವಣೆಯ ಸುಳಿವನ್ನು ನೀಡುವಂತಿತ್ತು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

