ಕಳ್ಳನ ಜೊತೆ ಕಾನ್ಸ್‌ಟೇಬಲ್‌ ರೂಮ್‌ ಶೇರ್‌ ಮಾಡಿದ್ದೇಕೆ!? ಕಾನ್ಸ್‌ಟೇಬಲ್‌ &ಬಾಂಬೆ ಸಲೀಂ ರೂಮ್‌ಮೇಟ್ ರಹಸ್ಯ!

 

ಕಾನೂನು ರಕ್ಷಕರಾದವರು ತಮ್ಮ ಕರ್ತವ್ಯಕ್ಕೆ ಅವಮಾನ ಮಾಡುತ್ತಿದ್ದರೆ, ಸಮಾಜದ ಭದ್ರತೆ ಹೇಗೆ? ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ ಗೋವಿಂದಪುರ ಪೊಲೀಸ್ ಠಾಣೆಯ ಪೇದೆ ಹೆಚ್.ಆರ್. ಸೋನಾರ್, ಖದೀಮ ಕಳ್ಳನ ಜೊತೆ ರೂಮ್ ಶೇರ್ ಮಾಡಿದ ಪ್ರಕರಣ ಇದೀಗ ರಾಜ್ಯದ ಪೊಲೀಸ್ ಇಲಾಖೆ ಮೇಲೆ ಗಂಭೀರ ಚರ್ಚೆ ಹುಟ್ಟಿಸಿದೆ.

ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಗೆ ಸೇರಿದ ಪೇದೆ, ಹೆಚ್.ಆರ್. ಸೋನಾರ್ ನದ್ದು, ಸೀಮಿತ ಸಂಬಳದ ಬದುಕು. ಆದರೆ ಈ ಪೇದೆ ಖದೀಮನಾಗಿ ಅಡಗಿ ಕುಳಿತಿದ್ದ ಕುಖ್ಯಾತ ಬಾಂಬೆ ಸಲೀಂನೊಂದಿಗೆ ರೂಂ ಶೇರ್ ಮಾಡಿಕೊಂಡಿದ್ದ. ಖದೀಮ ಬಾಂಬೆ ಸಲೀಂನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಪೇದೆಯ ಕಳ್ಳಾಟ ಬಯಲಾಗಿದೆ.

ಅವನ ಮೊಬೈಲ್ ಪರಿಶೀಲನೆಯಾಗಿದಾಗ ಸಿಕ್ಕಿದ ಮಾಹಿತಿ ಪೊಲೀಸರನ್ನೇ ಶಾಕ್ ಮಾಡಿತ್ತು. ಸಲೀಂನ ಫೋನ್‌ನಲ್ಲಿ ಪೊಲೀಸ್ ಡ್ರೆಸ್ ಹಾಕಿರುವ ಫೋಟೋಗಳು ಪತ್ತೆಯಾಗಿವೆ. ಸೋನಾರ್‌ನ ಪೊಲೀಸ್ ಯೂನಿಫಾರ್ಮ್ ಧರಿಸಿ, ಈ ಸಲೀಂ ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಿದ್ದ. ಪತ್ತೆಯಾದ ಫೋಟೋಗಳು, ಕಾಲ್ ಲಾಗ್‌ಗಳು ಎಲ್ಲವೂ ಪೇದೆ ಸೋನಾರ್‌ನೊಂದಿಗೆ, ಅವರ ನಿಕಟ ಸಂಪರ್ಕವನ್ನೇ ತೋರಿಸುತ್ತವೆ.

ವಿಚಾರಣೆಯ ವೇಳೆ ಖದೀಮ ಸಲೀಂ, ಪೊಲೀಸ್ ಕಾನ್ಸ್‌ ಟೇಬಲ್‌ ಸೋನಾರ್‌ನ ಮನೆಯಲ್ಲಿ ವಾಸವಿದ್ದ ವಿಚಾರ ಬಯಲಾಗಿದೆ. ಕಳ್ಳನ ಜೊತೆ ರೂಂ ಶೇರ್ ಮಾಡಿ ಕರ್ತವ್ಯ ಲೋಪವೆಸಗಿದ ಪೊಲೀಸ್ ಕಾನ್ಸ್ಟೇಬಲ್‌ ಸೋನಾರ್‌ನನ್ನು, ಪೂರ್ವ ವಿಭಾಗ ಡಿಸಿಪಿ ದೇವರಾಜ್ ಕೆಲಸದಿಂದ ಅಮಾನತು ಮಾಡಿದ್ದಾರೆ.

ಇದೀಗ ಪೊಲೀಸರು ಸಲೀಂನ ಜೊತೆ ಪೊಲೀಸ್ ಪೇದೆ ಬರೀ ಸ್ನೇಹ ಮಾತ್ರ ಇಟ್ಟುಕೊಂಡಿದ್ನಾ ಅಥವಾ ಬೇರೆ ಲಿಂಕ್ ಇದ್ಯಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

About The Author