ಅಧಿಕಾರ ಹಂಚಿಕೆ ವಿಚಾರ ತಾತ್ಕಾಲಿಕವಾಗಿ ಶಾಂತವಾಗಿರುವ ನಡುವೆಯೇ, ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಆಪ್ತರ ಬೆಂಬಲ ಪಡೆಯಲು ಚಟುವಟಿಕೆ ತೀವ್ರಗೊಳಿಸಿದ್ದಾರೆ. ಅಧಿಕೃತ ಸಭೆಗಳಿಲ್ಲದಿದ್ದರೂ, ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಾಗ ಸಿದ್ದು ವಲಯದ ಸಚಿವರು ಮತ್ತು ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಭಿನ್ನಾಭಿಪ್ರಾಯ ನಿವಾರಣೆ ಗುರಿಯಾಗಿದ್ದರೂ, ಸಿದ್ದರಾಮಯ್ಯ ಆಪ್ತರು ಇದಕ್ಕೆ ಹೆಚ್ಚಿನ ಸ್ಪಂದನೆ ತೋರಿಸುತ್ತಿಲ್ಲ ಎಂಬ ಮಾತುಗಳಿವೆ. ಮುಂದಿನ ದಿನಗಳಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸಿದ್ದು ವಲಯವನ್ನು ಮನವೊಲಿಸುವುದು ಡಿಕೆಶಿ ಯತ್ನದ ಪ್ರಮುಖ ಭಾಗ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.
ಈ ನಡುವೆ, ದೆಹಲಿಯಲ್ಲಿ ಸಚಿವ ಶಿವಾನಂದ ಪಾಟೀಲ್, ಖರ್ಗೆ ಅವರನ್ನು ಭೇಟಿ ಮಾಡಿ ಸಿಎಂ ಹುದ್ದೆಗೆ ತಮ್ಮನ್ನು ಪರಿಗಣಿಸಲು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಪ್ರಿಯಾಂಕ್ ಖರ್ಗೆಯವರು ಕೂಡ ಡಿಕೆಶಿ–ಡಿಕೆ ಸುರೇಶ್ ಜತೆ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ಡಿಕೆಶಿ ಅವರು ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ. ಪಾಟೀಲ್ ಅವರನ್ನು ಆಕಸ್ಮಿಕವಾಗಿ ಭೇಟಿ ಮಾಡಿದ್ದಾರೆ. ಡಿಕೆಶಿ “ಸತೀಶ್ ನನ್ನ ವೈರಿಯಲ್ಲ” ಎಂದು ಸ್ಪಷ್ಟಪಡಿಸಿದ್ದು, ಜಾರಕಿಹೊಳಿ ಕೂಡ ರಾಜ್ಯದ ಅಭಿವೃದ್ಧಿ ವಿಷಯವೇ ಚರ್ಚೆಯಾದದ್ದು ಎಂದು ಹೇಳಿದ್ದಾರೆ.
ಇದಲ್ಲದೆ ಪಕ್ಷದ ಅಂತರ್ರಾಜಕೀಯ ಚಲನಗಳು ತೀವ್ರವಾಗಿರುವ ಹಿನ್ನೆಲೆ, ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯಲಿರುವ ಸ್ಟೀರಿಂಗ್ ಸಮಿತಿ ಸಭೆಗೂ ವಿಶೇಷ ಮಹತ್ವ ಬಂದಿದೆ. ಈ ಸಭೆಯಲ್ಲಿ ರಾಜ್ಯದ ನಾಯಕತ್ವದ ಭವಿಷ್ಯ, ಸಚಿವ ಸಂಪುಟದ ಮರುಹಂಚಿಕೆ ಮತ್ತು ಕಾಂಗ್ರೆಸ್‌ನ ಮುಂದಿನ ಚುನಾವಣೆ ತಂತ್ರಗಳ ಬಗ್ಗೆ ಸ್ಪಷ್ಟತೆ ಮೂಡುವ ಸಾಧ್ಯತೆ ಇದೆ ಎಂದು ಪಕ್ಷವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ




