ಬೆಂಗಳೂರು ನಗರದಲ್ಲಿ ಮತ್ತೊಂದು ನಿದ್ದೆಗೆಡಿಸುವಂತೆ ದುರ್ಘಟನೆ ನಡೆದಿದೆ. ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಪತಿಯೊಬ್ಬ ತನ್ನ 2ನೇ ಹೆಂಡತಿಯನ್ನು ನಡುಬಜಾರಿನಲ್ಲಿ ಮಗಳೆದುರೆಯೇ ಬರ್ಬರವಾಗಿ ಹತ್ಯೆ ಮಾಡಿದ ಮನಕಲುಕುವಂತಹ ಘಟನೆ ನಡೆದಿದೆ.
ಸೆಪ್ಟೆಂಬರ್ 22 ಬೆಳಗ್ಗೆ 11.35ರ ಸುಮಾರಿಗೆ ಈ ಘಟನೆ ನಡೆದಿದೆ. ಚಿಕ್ಕಮಗಳೂರು ಮೂಲದ ರೇಖಾ ಎಂಬ ಮಹಿಳೆ ಮೇಲೆ, ಆಕೆಯ 2ನೇ ಗಂಡ ಲೋಕೇಶ್ ಅಲಿಯಾಸ್ ಲೋಹಿತಾಶ್ವ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ದಾಳಿ ಬೆಂಗಳೂರಿನ ಸುಂಕದಕಟ್ಟೆ ಬಸ್ ನಿಲ್ದಾಣದಲ್ಲಿ ನಡೆದಿದೆ. ನೂರು ಜನರ ಮುಂದೆ, ಮತ್ತು ಭದ್ರತೆಯಿಲ್ಲದೇ ನಿಂತಿದ್ದ 12 ವರ್ಷದ ಮಗಳೆದುರೆಯೇ ಈ ಕ್ರೂರತೆ ನಡೆದಿದೆ.
ಆರೋಪಿ ಲೋಹಿತಾಶ್ವ ಮೊದಲು ಬಸ್ ನಿಲ್ದಾಣದಲ್ಲೇ ಎರಡು ಬಾರಿ ಚಾಕು ಇರಿದಿದ್ದಾನೆ. ಬಳಿಕ, ಆಕೆಯನ್ನು ಸುಮಾರು 30 ಮೀಟರ್ ದೂರಕ್ಕೆ ಎಳೆದೊಯ್ದು ಮತ್ತಷ್ಟು ಬಾರಿ ಚಾಕು ಇರಿದಿದ್ದಾನೆ. ಒಟ್ಟು 11 ಬಾರಿ ಚಾಕು ಇರಿತವಾಗಿದ್ದು, ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾಳೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಕೂಡ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ರೇಖಾ ಮೂಲತಃ ತುಮಕೂರಿನ ಶಿರಾ ಭಾಗದವರು. ಆಕೆ ಈ ಹಿಂದೆ ಇನ್ನೊಬ್ಬರ ಜೊತೆ ವಿವಾಹಿತರಾಗಿದ್ದರು. ಡಿವೋರ್ಸ್ ನಂತರ ಲೋಕೇಶ್ ಜೊತೆ ರಹಸ್ಯವಾಗಿ ಮದುವೆ ಮಾಡಿಕೊಂಡಿದ್ದರು. ಹತ್ಯೆಯ ಹಿಂದೆ ತೀವ್ರ ಮಾನಸಿಕ ಕುಂದುಕೊರತೆ, ಅನುಮಾನ ಹಾಗೂ ನಂಬಿಕೆಯ ಕೊರತೆ ಮುಖ್ಯ ಕಾರಣ ಎನ್ನಲಾಗಿದೆ.
ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿ ಲೋಕೇಶ್ ಪತ್ತೆಹಚ್ಚಲು ತಂಡಗಳನ್ನು ರಚಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಕ್ರೂರ ಕೃತ್ಯದಿಂದ ಬಿಸುಳಿದ ಭದ್ರತಾ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ವರದಿ : ಲಾವಣ್ಯ ಅನಿಗೋಳ