ಉಚಿತ ಕೊಡುಗೆ ಭರವಸೆ ನೀಡಿದರೆ ಪಕ್ಷವೇ ರದ್ದು?

ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳ ಭರವಸೆ ನೀಡುವ ಅಥವಾ ವಿತರಿಸುವ ರಾಜಕೀಯ ಪಕ್ಷಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿಸಿದೆ.

ಈ ಅರ್ಜಿಯಲ್ಲಿ, ಉಚಿತ ಕೊಡುಗೆಗಳ ಭರವಸೆ ನೀಡುವ ರಾಜಕೀಯ ಪಕ್ಷಗಳ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಪಕ್ಷದ ನೋಂದಣೆಯನ್ನು ರದ್ದುಪಡಿಸಬೇಕು ಎಂದು ನಿರ್ದೇಶನ ನೀಡುವಂತೆ ಮನವಿ ಮಾಡಲಾಗಿದೆ.

ವಕೀಲ ಅಶ್ವಿನಿ ಉಪಾಧ್ಯಾಯ ಅವರು ಈ PIL ಸಲ್ಲಿಸಿದ್ದು, ಈ ವಿಷಯಕ್ಕೆ ಸಂಬಂಧಿಸಿ 2022ರಲ್ಲೇ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಲಾಗಿತ್ತು. ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಸೂರ್ಯ ಮತ್ತು ಚಂದ್ರರನ್ನು ಹೊರತುಪಡಿಸಿ ಉಳಿದ ಎಲ್ಲವನ್ನೂ ಕೊಡುತ್ತೇವೆ ಎಂಬಂತೆ ಭರವಸೆ ನೀಡುತ್ತಿವೆ.

ಇದು ಭ್ರಷ್ಟಾಚಾರಕ್ಕೆ ಸಮಾನವಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ತಲ್ಯ ಬಾಗಿ ಅವರಿದ್ದ ಪೀಠ, ಈ ಅರ್ಜಿಯ ವಿಚಾರಣೆಯನ್ನು ಮಾರ್ಚ್ ತಿಂಗಳಲ್ಲಿ ಪಟ್ಟಿ ಮಾಡಿದೆ.

ಈ ಮೊದಲು, 2022ರ ಜನವರಿ 25ರಂದು ಆಗಿನ ಮುಖ್ಯ ನ್ಯಾಯಮೂರ್ತಿ N.V. ರಮಣ ಅವರ ನೇತೃತ್ವದ ಪೀಠ, ಇದೇ PIL ಕುರಿತು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿತ್ತು. ಈ ವೇಳೆ ಇದು ಗಂಭೀರ ವಿಷಯವಾಗಿದ್ದು, ಕೆಲ ಸಂದರ್ಭಗಳಲ್ಲಿ ಉಚಿತ ಕೊಡುಗೆಗಳ ಬಜೆಟ್ ಸಾಮಾನ್ಯ ಬಜೆಟ್‌ಗಿಂತಲೂ ಹೆಚ್ಚಾಗುತ್ತಿದೆ ಎಂದು ನ್ಯಾಯಪೀಠ ಗಮನ ಸೆಳೆದಿತ್ತು.

ವರದಿ : ಲಾವಣ್ಯ ಅನಿಗೋಳ

About The Author