ಟೊಮೇಟೊ ಹೆಚ್ಚು ತಿಂದರೆ ಕಿಡ್ನಿ ಸ್ಟೋನ್ ಬರುತ್ತದೆ ಎನ್ನುವ ನಂಬಿಕೆ ಹಲವರಲ್ಲಿದೆ. ಇದರಿಂದ ಕೆಲವರು ಟೊಮೇಟೊ ಸೇವನೆ ಮಾಡುವುದನ್ನೇ ಬಿಟ್ಟು ಬಿಡುತ್ತಾರೆ. ಆದರೆ ಇದು ನಿಜವಾಗಿಯೂ ಕಾರಣವಾಗುತ್ತದೆಯೇ ಎಂಬ ಬಗ್ಗೆ ಆರೋಗ್ಯ ತಜ್ಞರ ಅಭಿಪ್ರಾಯ ತಿಳಿದುಕೊಳ್ಳುವುದು ಮುಖ್ಯ.
ಆರೋಗ್ಯ ತಜ್ಞರ ಪ್ರಕಾರ, ಟೊಮೇಟೊ ಕಿಡ್ನಿ ಸ್ಟೋನ್‌ಗೆ ನೇರ ಕಾರಣವಾಗುವುದಿಲ್ಲ. ಟೊಮೇಟೊದಲ್ಲಿ ಆಕ್ಸಲೇಟ್ ಅಂಶ ಇರುವುದಾದರೂ ಅದು ಬಹಳ ಕಡಿಮೆ — 100 ಗ್ರಾಂ ಟೊಮೇಟೊದಲ್ಲಿ ಕೇವಲ 5 ಮಿ.ಗ್ರಾಂ. ಈ ಪ್ರಮಾಣ ಕಲ್ಲು ರೂಪುಗೊಳ್ಳಲು ಸಾಕಾಗುವುದಿಲ್ಲ.
ಕಿಡ್ನಿ ಸ್ಟೋನ್‌ಗೆ ಪ್ರಮುಖ ಕಾರಣ ನಿರ್ಜಲೀಕರಣ. ಪ್ರತಿದಿನ 2.5–3 ಲೀಟರ್ ನೀರು ಕುಡಿಯದೇ ಇದ್ದರೆ ಸ್ಟೋನ್ ಸಮಸ್ಯೆಯ ಸಾಧ್ಯತೆ ಹೆಚ್ಚಾಗುತ್ತದೆ. ಕೆಲವು ಚಯಾಪಚಯ ಸಮಸ್ಯೆಗಳು, ಯೂರಿಕ್ ಆಮ್ಲ, ಸ್ಟ್ರುವೈಟ್, ಸಿಸ್ಟೈನ್ ಕಲ್ಲುಗಳೂ ಕಾರಣವಾಗಬಹುದು.
ಮಾಂಸಾಹಾರದಿಂದಲೇ ಸ್ಟೋನ್ ಬರುತ್ತದೆ ಎನ್ನುವ ನಂಬಿಕೆಯೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲ.
ಕಿಡ್ನಿ ಸಮಸ್ಯೆ, ಮಧುಮೇಹ, ಅಥವಾ ಹೆಚ್ಚಿನ ರಕ್ತದೊತ್ತಡ ಇದ್ದರೆ ಪ್ರೋಟೀನ್ ಕಡಿಮೆ ಇರುವ ಆಹಾರ ತೆಗೆದುಕೊಳ್ಳುವುದು ಉತ್ತಮ. ಆದರೆ ಆಹಾರದ ಜೊತೆಗೆ ವೈದ್ಯರ ಮಾರ್ಗದರ್ಶನ ಮತ್ತು ತಜ್ಞರ ಸಲಹೆ ಹೆಚ್ಚು ಮುಖ್ಯವಾದುದರಿಂದ, ನಿಯಮಿತವಾಗಿ ವೈದ್ಯಕೀಯ ಸಲಹೆ ಪಡೆಯುವುದು ಅವಶ್ಯ…
ವರದಿ : ಗಾಯತ್ರಿ ಗುಬ್ಬಿ

