ಪ್ರಜ್ವಲ್ ಜೀವನ ಪರ್ಯಂತ ಜೈಲೇ ಗತಿ? ಅನ್ವಯ ಆಗಲ್ವಂತೆ ಜಾಮೀನು ನಿಯಮ!

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪನ್ನು ಪ್ರಶ್ನಿಸಿ ಪ್ರಜ್ವಲ್ ಹೈಕೋರ್ಟ್‌ನಲ್ಲಿ ಅಪೀಲ್ ಸಲ್ಲಿಸಿದ್ದು, ಅರ್ಜಿ ವಿಚಾರಣೆ ವೇಗವಾಗಿ ಮುಂದುವರಿಯುತ್ತಿದೆ. ಜಾಮೀನು ಮಂಜೂರು ಮಾಡುವ ಪ್ರಶ್ನೆಯಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರು ಈ ಪ್ರಕರಣಕ್ಕೆ ಜಾಮೀನು ನಿಯಮ ಅನ್ವಯವಾಗುವುದಿಲ್ಲ ಎಂದು ದೃಢವಾಗಿ ವಾದಿಸಿದ್ದಾರೆ.

ನ್ಯಾಯಮೂರ್ತಿಗಳಾದ ಕೆ.ಎಸ್. ಮುದಗಲ್ ಮತ್ತು ಟಿ. ವೆಂಕಟೇಶ್ ನಾಯಕ್ ಅವರ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಜ್ವಲ್ ಪರವಾಗಿ ಹಿಂದೆ ವಾದ ಮಂಡಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ ಅವರ ನಂತರ, ಇಂದು ಎಸ್‌ಐಟಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ತೀಕ್ಷ್ಣ ಪ್ರತಿವಾದಗಳನ್ನು ಮುಂದಿಟ್ಟಿದ್ದಾರೆ.

2024ರ ಏಪ್ರಿಲ್‌ನಲ್ಲಿ ಹಾಸನದಲ್ಲಿ ವೈರಲ್ ಆದ ವಿಡಿಯೋಗಳ ನಂತರ ಪ್ರಜ್ವಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ತೀವ್ರಗೊಂಡು, ರಾಜ್ಯ ಮಹಿಳಾ ಆಯೋಗದ ಒತ್ತಡದ ಮೇರೆಗೆ ಸರ್ಕಾರ ಎಸ್‌ಐಟಿ ರಚಿಸಿತು. ಇದರಲ್ಲಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿದ್ದು, ಒಂದರಲ್ಲಿ ಈಗಾಗಲೇ ಶಿಕ್ಷೆ ಘೋಷಿತವಾಗಿದ್ದು, ಉಳಿದ ಮೂರು ಕೇಸುಗಳಲ್ಲಿ ವಿಚಾರಣೆ ಸಾಗುತ್ತಿದೆ.

ಮೊದಲ ಎಫ್‌ಐಆರ್ ಮೇ 5ರಂದು ದಾಖಲಾಗಿದ್ದಾಗಲೇ ಪ್ರಜ್ವಲ್ ದೇಶ ತೊರೆದು ಜರ್ಮನಿಗೆ ತೆರಳಿದ್ದರು. ನಂತರ ಕೇಂದ್ರ ಸರ್ಕಾರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಪಡಿಸಿ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿತು. ಆಗಸ್ಟ್‌ನಲ್ಲಿ ವಾಪಸ್ಸಾದಾಗ ವಿಮಾನ ನಿಲ್ದಾಣದಲ್ಲೇ ಅವರನ್ನು ಬಂಧಿಸಲಾಯಿತು. ಸೆಪ್ಟೆಂಬರ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇಂದು ನಡೆದ ವಿಚಾರಣೆಯಲ್ಲಿ ಪ್ರೊ. ರವಿವರ್ಮ ಕುಮಾರ್ ವಾದಿಸಿ, ಪ್ರಜ್ವಲ್ ನ್ಯಾಯಾಲಯವನ್ನು ಹಲವಾರು ಬಾರಿ ತಪ್ಪುಗೊಳಿಸಲು ಪ್ರಯತ್ನಿಸಿದ್ದಾರೆ, ವಿಚಾರಣೆ ತಡಮಾಡಲು ಅರ್ಜಿಗಳನ್ನು ಸಲ್ಲಿಸಿ ವಾಪಸ್ ಪಡೆದಿದ್ದಾರೆ, ಇದು ನ್ಯಾಯಾಂಗದ ದುರ್ಬಳಕೆ ಎಂದು ಹೇಳಿದರು.

ಜಾಮೀನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಬಿಡುಗಡೆ ಮಾಡಿದರೆ ಮತ್ತೆ ಅಪರಾಧ ಮಾಡುವ ಸಾಧ್ಯತೆ, ಸಂತ್ರಸ್ತೆಯ ಸುರಕ್ಷತೆಗೆ ಅಪಾಯ, ಜೊತೆಗೆ ಒಂದು ಪ್ರಕರಣದಲ್ಲಿ ಕಿಡ್ನಾಪ್ ಆರೋಪವೂ ಇದೆ” ಎಂದು ಎಚ್ಚರಿಸಿದರು. ಜೊತೆಗೆ, ಈ ಪ್ರಕರಣದಲ್ಲಿ CrPC 439 ಜಾಮೀನು ನಿಯಮ ಅನ್ವಯಿಸುವುದಿಲ್ಲ, ಏಕೆಂದರೆ ಈಗಾಗಲೇ ಶಿಕ್ಷೆ ವಿಧಿಸಲಾಗಿದೆ ಎಂದು ಕಾನೂನು ಆಧಾರ ಉಲ್ಲೇಖಿಸಿದರು. ಇನ್ನು ಪ್ರಜ್ವಲ್ ಪರ ವಕೀಲರು, ಪ್ರಾಥಮಿಕ ಸಾಕ್ಷಿಗಳೇ ಇಲ್ಲ, ಶಿಕ್ಷೆ ತೀವ್ರವಾಗಿದೆ ಎಂದು ವಾದಿಸಿದ್ದು, ಕೋರ್ಟ್ ಪ್ರತಿವಾದಿಗಳಿಗೆ ಲಿಖಿತ ವಾದ ಸಲ್ಲಿಸಲು ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆ ನಾಳೆ ಅಂದರೆ ನ. 24 ಮಧ್ಯಾಹ್ನ 2:30ಕ್ಕೆ ಮುಂದೂಡಲಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author