ತಿರುಮಲ ಹಿಂದೂಗಳ ಪಾಲಿನ ಪವಿತ್ರ ಪುಣ್ಯಕ್ಷೇತ್ರ.. ಪ್ರತಿ ಹಿಂದೂ ಕೂಡ ಜೀವನದಲ್ಲಿ ಒಮ್ಮೆಯಾದ್ರೂ ಈ ತಿರುಮಲದ ವೆಂಕಟೇಶ್ವರನ ದರ್ಶನ ಮಾಡೇ ಮಾಡ್ತಾನೆ.. ಸಂಕಟ ಬಂದಾಗಂತೂ ಮೊದಲ ನೆನಪಾಗೋದು ವೆಂಕಟರಮಣನೇ.. ಆದ್ರೆ ಕೆಲ ದಿನಗಳ ಹಿಂದೆ ಇದೇ ವೆಂಕಟೇಶ್ವರನಿಗೇ ಸಂಕಷ್ಟ ಎದುರಾಗಿತ್ತು. ಇಡೀ ತಿರುಮಲವೇ ಅಪವಿತ್ರ ಆಗಿತ್ತು. ಭಕ್ತರ ನಂಬಿಕೆಗೆ ಭಾರಿ ಪೆಟ್ಟುಬಿದ್ದಿತ್ತು.. ಇದಾದ ಬಳಿಕ ಟಿಟಿಡಿ ಹೊಸ ನಿರ್ಧಾರವೊಂದನ್ನ ಕೈಗೊಂಡಿದೆ.. ತಿಮ್ಮಪ್ಪನ ಸನ್ನಿಧಿಯಲ್ಲಿ ಇನ್ಮುಂದೆ ಹಿಂದೂಗಳಷ್ಟೇ ಕೆಲಸ ಮಾಡ್ತಾರೆ.. ಅನ್ಯಧರ್ಮೀಯರಿಗೆ ಗೇಟ್ಪಾಸ್ ಕೊಡಲಾಗಿದೆ…
ತಿರುಪತಿ ದೇವಸ್ಥಾನ ಭಾರತದ ಪ್ರಸಿದ್ಧ ದೇವಸ್ಥಾನ. ಇಷ್ಟೇ ಅಲ್ಲ ಶ್ರೀಮಂತ ದೇವಸ್ಥಾನ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಆದರೆ ಕೆಲ ತಿಂಗಳ ಹಿಂದೆ ತಿರುಪತಿಯ ಪ್ರಸಾದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಲಾಗಿದೆ ಅನ್ನೋ ಆರೋಪ ಕೋಲಾಹಲ ಸೃಷ್ಟಿಸಿತ್ತು. ಇದಕ್ಕೆ ಹಿಂದೂಯೇತರ ಸರ್ಕಾರ, ಆಡಳಿತ ಮಂಡಳಿ ಸದಸ್ಯರು ಕಾರಣ ಅನ್ನೋ ಆರೋಪವೂ ಕೇಳಿಬಂದಿತ್ತು. ಈ ವಿವಾದದ ಬಳಿಕ ಹಿಂದೂ ದೇವಸ್ಥಾನದಲ್ಲಿ ಹಿಂದೂಯೇತರ ನೌಕರರು, ಸದಸ್ಯರಿಗೆ ಅವಕಾಶ ನೀಡಬಾರದು ಅನ್ನೋ ಕೂಗು ಜೋರಾಗಿತ್ತು. ಇದೀಗ ದೇಗುಲದಲ್ಲಿನ ಹಿಂದೂಯೇತರ ನೌಕರರು, ಆಡಳಿತ ಮಂಡಳಿ ಸದಸ್ಯರಿಗೆ ಗೇಟ್ ಪಾಸ್ ನೀಡಲು ಆದೇಶಿಸಿದೆ. ಈ ಕುರಿತು ಸರ್ಕಾರಕ್ಕೆ ಸೂಚಿಸಿದೆ. ಶೀಘ್ರದಲ್ಲೇ ಈ ಕುರಿತು ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸುವಂತೆ ಕೋರಿದೆ..
ಹಿಂದೂ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಅವಕಾಶ ನೀಡುವುದು ಸರಿಯಲ್ಲ. ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದವರು ದೇಗುಲದಲ್ಲಿ ಶ್ರದ್ಧಾ ಭಕ್ತಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಟಿಟಿಡಿ ಚೇರ್ಮೆನ್ ಬಿಆರ್ ನಾಯ್ಡು ಹೇಳಿದ್ದಾರೆ. ಟಿಟಿಡಿ ಈ ನಿರ್ಧಾರದಿಂದ ದೇವಸ್ಥಾನದ 700 ಖಾಯಂ ಉದ್ಯೋಗಿಗಳ ಪೈಕಿ 300 ಮಂದಿ ಅನ್ಯ ಧರ್ಮೀಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
ತಿರುಮಲ ಹಿಂದೂ ದೇಗುಲ ಆಗಿದ್ರೂ, ಇಲ್ಲಿ 300 ಮಂದಿ ಅನ್ಯ ಧರ್ಮೀಯರು ಖಾಯಂ ಕೆಲಸ ಗಿಟ್ಟಿಸಿಕೊಂಡಿದ್ರು.. ದೇಗುಲದಲ್ಲಿ ಒಟ್ಟಾರೆ 14,000 ಮಂದಿ ಗುತ್ತಿಗೆ ನೌಕರರಿದ್ದಾರೆ.. ಈ ಪೈಕಿ ಹಲವರಿಗೆ ಈ ನಿರ್ಧಾರದ ಬಿಸಿ ತಟ್ಟಲಿದೆ. ಖಾಯಂ ನೌಕಕರ ಪಕಿ 300 ಹಿಂದೂಯೇತರ ನೌಕರರು ಸ್ವಯಂ ನಿವೃತ್ತಿ ಘೋಷಿಸಬೇಕು, ಅಥವಾ ಆಂಧ್ರ ಪ್ರದೇಶ ಸರ್ಕಾರದ ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಆದೇಶಿಸಲಾಗಿದೆ.
ಹಿಂದೂಯೇತರ ಸದಸ್ಯರು ದೇಗುಲಕ್ಕೆ ಬರುವಾಗ ಪಾವಿತ್ರ್ಯತೆ ಕಾಪಾಡಿಕೊಳ್ಳುವ ಯಾವುದೇ ಹೊಣೆಗಾರಿಕೆ ಅವರ ಮೇಲೆ ಇರುವುದಿಲ್ಲ. ತಿಮ್ಮಪ್ಪನ ದೇವಸ್ಥಾನ ನಂಬಿಕೆ ಹಾಗೂ ಭಕ್ತಿಯ ಮೇಲೆ ನಡೆಯುತ್ತದೆ. ಹೀಗಾಗಿ ಹಿಂದೂ ದೇಗುಲದಲ್ಲಿ ದೇವರ ಮೇಲೆ ಭಕ್ತಿ, ನಂಬಿಕೆ, ಗೌರವ ಇಲ್ಲದ ಹಿಂದೂಯೇತರರು ಅಷ್ಟೇ ಪಾವಿತ್ರ್ಯತೆಯಿಂದ, ಗೌರವದಿಂದ ನಡೆದುಕೊಳ್ಳಲು ಹೇಗೆ ಸಾಧ್ಯ ಎಂದು ಟಿಟಿಡಿ ಪ್ರಶ್ನಿಸಿದೆ.
ಇನ್ನುತಿಮ್ಮಪ್ಪನ ದೇವಸ್ಥಾನದ ಆವರಣದಲ್ಲಿ ಯಾರೇ ಆಗಲಿ ರಾಜಕೀಯ ಭಾಷಣ ಮಾಡುವಂತಿಲ್ಲ. ರಾಜಕೀಯ ವಿಚಾರಗಳನ್ನು ಹಂಚಿಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಿ ಸಭೆಯು ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಗೊಂದು ವೇಳೆ ಯಾರಾದರೂ ನಿಯಮ ಮೀರಿದಲ್ಲಿ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ.
ತಿರುಮಲದಲ್ಲಿ ಅನ್ಯಧರ್ಮೀಯ ಸಿಬ್ಬಂದಿಗೆ ಗೇಟ್ಪಾಸ್ ಜೊತೆ ಮತ್ತೊಂದು ಖಡಕ್ ಕ್ರಮ ಕೈಗೊಳ್ಳಲಾಗಿದೆ.. ಅದೇನಂದ್ರೆ ತಿರುಮಲದಲ್ಲೇ ಮುಮ್ತಾಜ್ ಹೋಟೆಲ್ ನಿರ್ಮಾಣ ಆಗ್ತಿತ್ತು.. ಆದ್ರೆ ಇದರ ಅನುಮತಿಯನ್ನ ರದ್ದುಮಾಡಲಾಗಿದೆ.. ಹಿಂದೂಗಳ ಪವಿತ್ರ ಕ್ಷೇತ್ರವಾದ ತಿರುಮಲದಲ್ಲಿ ಮುಮ್ತಾಜ್ ಹೋಟೆಲ್ ನಿರ್ಮಾಣಕ್ಕೆ ಅಪಸ್ವರ ಎದ್ದಿತ್ತು.. ಈ ಕಾರಣದಿಂದ ಬಿ.ಆರ್.ನಾಯ್ಡು ಅವ್ರ ನೇತೃತ್ವದ ಟೀಂ ಈಗ ಮುಮ್ತಾಜ್ ಹೋಟೆಲ್ ಅನುಮತಿ ರದ್ದು ಮಾಡಿದೆ.
ಇನ್ನು ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಇನ್ಮೇಲೆ ಇನ್ನಷ್ಟು ಸಲೀಸು.. ಇಷ್ಟು ದಿನ ವೆಂಕಟೇಶ್ವರನ ದರ್ಶನ ಮಾಡ್ಬೇಕು ಅಂದ್ರೆ ಗಂಟೆಗಟ್ಟಲೆ ಕಾಯಬೇಕಿತ್ತು.. ಆದ್ರೆ ಇನ್ಮೇಲೆ ಒಂದು ಸಿನಿಮಾ ನೋಡಿ ಮುಗಿಸೋಷ್ಟರಲ್ಲಿ ದೇವರ ದರ್ಶನ ಮಾಡಿ ಹೊರಗೆ ಬರಬಹುದಾಗಿದೆ. . ತಿಮ್ಮಪ್ಪನ ದರ್ಶನಕ್ಕಾಗಿ ಭಕ್ತರು ದಿನಗಟ್ಟಲೇ ಕಾಯುವುದನ್ನು ತಪ್ಪಿಸಲು ಟಿಟಿಡಿ ಮಾಸ್ಟರ್ ಪ್ಲಾನ್ ಮಾಡಿದೆ. 2-3 ಗಂಟೆಯೊಳಗೆ ಎಲ್ಲ ಭಕ್ತರಿಗೆ ದರ್ಶನಾವಕಾಶ ಸಿಗುವಂತಾಗಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಸಿಕೊಳ್ಳಲು ಯೋಜಿಸಲಾಗಿದೆ.