ದೆಹಲಿಯಲ್ಲಿ ಮುಂದಿನ ವರ್ಷ ಫೆಬ್ರವರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇನ್ನು ಈ ಚುನಾವಣೆಗೆ ಅರವಿಂದ ಕೇಜ್ರಿವಾಲ್‌ರ ಆಪ್ ಈಗಾಗಲೇ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಚುನಾವಣೆಗೆ ಪೂರ್ಣ ಸಿದ್ಧವಾಗಿದೆ. ಸದ್ಯ ಬಿಜೆಪಿ ಸಿಎಂ ಅಭ್ಯರ್ಥಿ ಯಾರಾಗಬೇಕು ಅನ್ನೋದ್ರ ತಲಾಶ್ ಶುರುವಾಗಿದ್ದು, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ಮುಂಚೂಣಿಯಲ್ಲಿದೆ ಅನ್ನೋ ಗಾಸಿಪ್ ಕೇಳಿಬರ್ತಿದೆ.
ನವದೆಹಲಿ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿರುವ ಆಪ್ ಸಂಚಾಲಕ ಹಾಗೂ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಪಕ್ಷ ಈಗಾಗಲೇ ಮಾಜಿ ಸಿಎಂ ಶೀಲಾ ದೀಕ್ಷಿತ್ ಪುತ್ರ ಸಂದೀಪ್ ದೀಕ್ಷಿತ್‌ರನ್ನು ಕಣಕ್ಕಿಳಿಸಿದೆ. ಆದರೆ ಬಿಜೆಪಿ ಅಭ್ಯರ್ಥಿ ಹೆಸರು ಇನ್ನೂ ಆಖೈರಾಗಿಲ್ಲ. ಬಿಜೆಪಿ ಇಲ್ಲಿ ಸ್ಮೃತಿ ಇರಾನಿಯನ್ನ ಕಣಕ್ಕಿಳಿಸಲು ಚಿಂತನೆ ನಡೆಸಿದೆ ಅನ್ನೋ ವದಂತಿಗಳು ಕೇಳಿಬರುತ್ತಿವೆ.
ಇನ್ನು ಹೀಗಾಗಿ ಸಹಜವಾಗೇ ಸ್ಮೃತಿ ಹೆಸರು ಸಿಎಂ ಅಭ್ಯರ್ಥಿ ಹುದ್ದೆಗೂ ಮುಂಚೂಣಿಗೆ ಬಂದಿದೆ. ಸ್ಮೃತಿ ಅವರನ್ನು ಪ್ರಚಾರ ಸಮಿತಿ ಮುಖ್ಯಸ್ಥೆ ಮಾಡುವ ಇರಾದೆ ಕೂಡ ಹೈಕಮಾಂಡ್‌ಗಿದೆ ಎನ್ನಲಾಗಿದೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಿಶೋರಿ ಲಾಲ್ ಶರ್ಮಾ ವಿರುದ್ಧ ಸ್ಪರ್ಧಿಸಿ ಸೋತಿದ್ದ ಇರಾನಿಗೆ ಇದುವರೆಗೆ ಬಿಜೆಪಿಯಲ್ಲಿ ಯಾವ ಹುದ್ದೆಯನ್ನೂ ಕೊಡಲಾಗಿಲ್ಲ.