ಉಪಲೋಕಾಯುಕ್ತರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಮೇಲೆ ಬಿಜೆಪಿ ಮುಗಿಬಿದ್ದಿದೆ. ‘ಏಟಿಗೆ ಎದುರೇಟು’ ಅನ್ನೋಹಾಗೆ ಒಂದರ ಮೇಲೊಂದು ಟಾಂಗ್ ಗಳು ಶುರುವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿರುವ ಬಗ್ಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ವ್ಯಕ್ತಪಡಿಸಿದ ಕಳವಳ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಶೇ.63 ರಷ್ಟು ಭ್ರಷ್ಟಾಚಾರ ಇದೆ. ಕೇರಳದಲ್ಲಿ ಇದು ಕೇವಲ 10% ಮಾತ್ರ. ಇದನ್ನು ಈಗಲೇ ನಿಯಂತ್ರಿಸದಿದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಾಗಬಹುದು ಎಂದು ಎಚ್ಚರಿಸಿದರು.
ಉಪಲೋಕಾಯುಕ್ತರ ಈ ಹೇಳಿಕೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ,
ವಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಮೇಲೆ ಟ್ವಿಟ್ ಮೂಲಕ ಕಿಡಿಕಾರಿದ್ದಾರೆ. ಶೇ. 40 ಕಮಿಷನ್ ಎಂದು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪ, ಅಪಪ್ರಚಾರ ಮಾಡಿ ಕನ್ನಡಿಗರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಕಮಿಷನ್ ದಂಧೆಯಲ್ಲಿ ಮುಳುಗಿದೆ. ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಕರ್ನಾಟಕದಲ್ಲಿ ಶೇ. 63 ಭ್ರಷ್ಟಾಚಾರ ಇದೆ ಎಂದು ಸ್ವತಃ ಉಪಲೋಕಾಯುಕ್ತರೇ ರಾಜ್ಯ ಸರ್ಕಾರಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅಂತ ಟ್ವಿಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ಈಗೇನು ಹೇಳುತ್ತೀರಿ? ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತೀರಾ? ಅಥವಾ ಇದೇ ಭಂಡ ಬಾಳು ಮುಂದುವರೆಸುತ್ತೀರಾ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.ಇದೇ ವೇಳೆ, ಕಾಂಗ್ರೆಸ್ ಹಿಂದೆ ಪಡೆದಿದ್ದ 136 ಸ್ಥಾನಗಳ ಮೇಲೆ ವ್ಯಂಗ್ಯವಾಡಿದ ಅಶೋಕ್, ಈಗ ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆದರೆ ಕಾಂಗ್ರೆಸ್‌ಗೆ 36 ಸೀಟೂ ಬರುವುದಿಲ್ಲ. ಇದು ನನ್ನ ಗ್ಯಾರೆಂಟಿ ಎಂದಿದ್ದಾರೆ.
ಈಗ ಕಾಂಗ್ರೆಸ್ ಆಡಳಿತದಲ್ಲಿರುವ ಸಂದರ್ಭದಲ್ಲೇ ಉಪಲೋಕಾಯುಕ್ತರು ರಾಜ್ಯದ ಭ್ರಷ್ಟಾಚಾರ ಮಟ್ಟ ಕುರಿತು ನೀಡಿರುವ ಹೇಳಿಕೆ ಮತ್ತೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ಬೆನ್ನಲ್ಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಾಡಿರುವ ಆರೋಪಗಳು ಎಷ್ಟು ನ್ಯಾಯಸಮ್ಮತ? ಕಾಂಗ್ರೆಸ್ vs ಬಿಜೆಪಿ ರಾಜಕೀಯ ಟಾಂಗ್ ಗಳಲ್ಲಿ ತಪ್ಪು ಯಾರದು? ಇದು ಆಡಳಿತದ ವೈಫಲ್ಯವಾ? ಅಥವಾ ರಾಜಕೀಯದ ಅತಿರೇಕವಾ? ನೀವೇನಂತೀರಿ ಕಾಮೆಂಟ್ ಮಾಡಿ.
ವರದಿ : ಲಾವಣ್ಯ ಅನಿಗೋಳ

