ಇಡೀ ಕಲಬುರಗಿ ಬೆಚ್ಚಿ ಬಿದ್ದಿದ್ದ ದರೋಡೆ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ಶನಿವಾರ ಅಂದರೆ ನೆನ್ನೆ ಮಧ್ಯಾಹ್ನ 12.30ಕ್ಕೆ ಚಿನ್ನದಂಗಡಿಗೆ ನುಗ್ಗಿದ ನಾಲ್ವರು ಖದೀಮರು, ಗನ್ ತೋರಿಸಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಇದೀಗ ದರೋಡೆಕೋರರ ಬಗ್ಗೆ ಪೋಲೀಸರು ಮಹತ್ವದ ಸುಳಿವು ಪತ್ತೆ ಹಚ್ಚಿದ್ದಾರೆ. ದರೋಡೆ ಹಿಂದೆ ಇದ್ದಿದ್ದು ನಾಲ್ವರ ಕೈವಾಡವಲ್ಲ ಬದಲಿಗೆ ಐವರ ಕೈವಾಡ ಎಂಬುವುದು ತಿಳಿದುಬಂದಿದೆ. ದರೋಡೆ ವೇಳೆ ನಾಲ್ವರು ಮಾತ್ರ ಕಂಡಿದ್ದು, ಮತ್ತೊಬ್ಬ ಮಾಸ್ಟರ್ ಮೈಂಡ್ ಬಗ್ಗೆ ಪೊಲೀಸರು ಸುಳಿವು ಪತ್ತೆ ಹಚ್ಚಿದ್ದಾರೆ.
ಈ ದರೋಡೆ ಯಾವ ಸಿನಿಮಾಗೂ ಕಮ್ಮಿಯಿಲ್ಲ. ದರೋಡೆಗೂ ಮುನ್ನ ಚಿನ್ನದಂಗಡಿಯ ಒಳಗಿನ ಚಲನವಲನ ವಾಚ್ ಮಾಡಿದ್ದ ಖದೀಮರ ಪೈಕಿ ಇಬ್ಬರು ಚಿನ್ನದಂಗಡಿಗೆ ನುಗ್ಗಿದ್ದಾರೆ. ಇದರಲ್ಲಿ ಒಬ್ಬ ಪೊಲೀಸರ ಗಮನ ಬೇರೆಡೆ ಸೆಳೆಯಲು ನಾಟಕ ಮಾಡಿದ್ದಾನೆ. ಮೊಬೈಲ್‌ನಲ್ಲಿ ಮಾತಾಡಿದಂತೆ ನಟಿಸಿರುವ ದೃಶ್ಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಉಳಿದ ಮೂವರು ಮೊಬೈಲ್ ಬಳಸದೇ ಕೃತ್ಯ ಎಸಗಿದ್ದಾರೆ. ಇಬ್ಬರು ಸಿಗ್ನಲ್ ಕೊಡ್ತಿದ್ದಂತೆ ಮತ್ತಿಬ್ಬರು ಗನ್ ಸಮೇತ ಒಳ ನುಗ್ಗಿದ್ದು, ಜುವೆಲ್ಲರಿ ಶಾಪ್‌ನ ಸಿಬ್ಬಂದಿಯ ತಲೆಗೆ ಗನ್ ಪಾಯಿಂಟ್ ಇಟ್ಟು ಬೆದರಿಕೆ ಹಾಕಿದ್ದಾರೆ. ಕಾರು ಬೈಕ್ ಬಳಸಿದರೆ ಸಿಕ್ಕಿಬೀಳ್ತವೆಂಬ ಭಯದಲ್ಲಿ ಕಾಲ್ನಡಿಗೆಯಲ್ಲಿ ಬಂದಿದ್ದ ಕಳ್ಳರು, ಆಟೋ ಹತ್ತಿ ಎಸ್ಕೆಪ್ ಆಗಿದ್ದಾರೆ.
ದರೋಡೆ ಪ್ರಕರಣದಲ್ಲಿ 5ನೇ ಆರೋಪಿ ಮಾತ್ರ ಮೊಬೈಲ್ ಬಳಕೆ ಮಾಡಿದ್ದು, ಬಸ್ ನಿಲ್ದಾಣ ಬಳಿಯ ಹೋಟೆಲ್‌ನಲ್ಲಿ ಇತರರಿಗೆ ಫೋನ್‌ಪೇ ಮೂಲದ ಹಣ ವರ್ಗಾವಣೆ ಮಾಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಸದ್ಯ ಐದನೇ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿರುವ ಖಾಕಿ ಫೋನ್‌ಪೇ ಮಾಡಿರುವ ನಂಬರ್ ಆಧಾರದ ಮೇಲೆ ಹುಡುಕಾಟ ನಡೆಸಿದ್ದಾರೆ. ಇನ್ನು ಆರೋಪಿಗಳು ಕಲಬುರಗಿ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ನಂ.6ರಿಂದ ಬಸ್ ಹತ್ತಿಕೊಂಡು ಹೈದರಾಬಾದ್‌ನಿಂದ ಪಶ್ಚಿಮ ಬಂಗಾಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಆರೋಪಿಗಳ ಜಾಡು ಬೆನ್ನತ್ತಿದ ಪೊಲೀಸರು ಕೂಡ ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ.
ಇನ್ನೂ ಎರಡೂರು ಕೆಜಿ ಕಳುವಾಗಿದೆ ಅಂತಾ ಜುವೆಲ್ಲರಿ ಮಾಲೀಕ ಮಲಿಕ್ ಹೇಳಿದ್ದಾರೆ. ಆದರೆ ಪರಿಶೀಲನೆ ಮಾಡಿದಾಗ 820 ಗ್ರಾಮ್ ಚಿನ್ನಾಭರಣ ಅಂತಾ ಗೊತ್ತಾಗಿದೆ. ಸದ್ಯ ನಾಲ್ವರು ದರೋಡೆಕೋರರ ಬೇಟೆಗೆ 5 ಪೊಲೀಸರ ತಂಡ ಶೋಧಕ್ಕಿಳಿದಿದೆ. ಮೊಬೈಲ್ ಟವರ್ ಲೋಕೆಷನ್, ಸಿಡಿಆರ್ ಸಂಗ್ರಹಿಸಿ ತನಿಖೆ ನಡೆಸುತ್ತಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ