ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ಹೃದಯ ಕಲುಕುವ ಘಟನೆ ನಡೆದಿದೆ. ಮನೆಕೆಲಸದ ಮಹಿಳೆಯೊಬ್ಬರು ನಾಲ್ಕು ವರ್ಷದ ನಾಯಿ ಮರಿಯನ್ನು ಲಿಫ್ಟ್‌ನಲ್ಲಿ ಬಟ್ಟೆ ಒಗೆದಂತೆ ನೆಲಕ್ಕಪ್ಪಳಿಸಿ ಕೊಲೆಗೈದಿರುವ ಘಟನೆ ಬೆಳಕಿಗೆ ಬಂದಿದೆ. ಮಂಗಳವಾರ ಆರೋಪಿ ಪುಷ್ಪಲತಾ ಬಂಧಿತರಾಗಿದ್ದಾರೆ.
ತಮಿಳುನಾಡು ಮೂಲದ ಪುಷ್ಪಲತಾ ಎಂಬುವರು ಅಕ್ಟೋಬರ್ 31ರಂದು ಈ ಕೃತ್ಯ ಎಸಗಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಣ್ಣೂರು ರಸ್ತೆಯ ಶೋಭಾ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಎಂಬಿಎ ವಿದ್ಯಾರ್ಥಿನಿ ರಾಶಿಕಾ ಅವರ ಮನೆಯಲ್ಲಿ ಪುಷ್ಪಲತಾ ಕಳೆದ ಸೆಪ್ಟೆಂಬರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ತಿಂಗಳಿಗೆ 23 ಸಾವಿರ ರೂ. ಸಂಬಳ ಪಡೆಯುತ್ತಿದ್ದ ಅವರು, ರಾಶಿಕಾ ಅವರ ವಿದೇಶಿ ತಳಿಯ ನಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿದ್ದರು.
ಅಕ್ಟೋಬರ್ 31ರಂದು ನಾಯಿಗಳನ್ನು ಹೊರಗೆ ಕರೆದೊಯ್ದ ಪುಷ್ಪಲತಾ, ಕೆಲ ಸಮಯದ ಬಳಿಕ ವಾಪಸ್ ಕರೆತಂದಾಗ ‘ಗೂಸಿ’ ಎಂಬ ನಾಯಿ ಸತ್ತು ಹೋಗಿತ್ತು. ಪ್ರಾರಂಭದಲ್ಲಿ ಅದು ಅಪಘಾತ ಎಂದು ನಂಬಿದ ರಾಶಿಕಾ, ನಂತರ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ನಾಯಿ ಲಿಫ್ಟ್‌ನಲ್ಲಿ ಕ್ರೂರಿಯಾಗಿ ನೆಲಕ್ಕಪ್ಪಳಿಸಿ ಕೊಲ್ಲಲ್ಪಟ್ಟಿರುವುದು ದೃಢಪಟ್ಟಿತು. ಇದರ ಆಧಾರದ ಮೇಲೆ ರಾಶಿಕಾ ಪೊಲೀಸರು ಬಳಿ ದೂರು ನೀಡಿದ್ದು, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ವಿಚಾರಣೆ ವೇಳೆ ಪುಷ್ಪಲತಾ, ನಾಯಿ ಎಳೆದರೂ ಬರಲಿಲ್ಲ, ಕೋಪದಲ್ಲಿ ಒಗೆದಾಗ ಸತ್ತು ಹೋಯ್ತು ಎಂದು ಹೇಳಿಕೆ ನೀಡಿದ್ದಾರೆ. ಇನ್ನೊಂದೆಡೆ, ನಾಯಿ ಕೊಲೆ ಬಳಿಕ ಮನೆಯಿಂದ ಚಿನ್ನಾಭರಣ ಕಳವು ಪ್ರಕರಣವೂ ಬೆಳಕಿಗೆ ಬಂದಿದೆ. ಚಿನ್ನದ ಸರ, ವಜ್ರದ ಉಂಗುರ ಮತ್ತು ಚಿನ್ನದ ಉಂಗುರ ಕಳವಾಗಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ನಾಯಿಯ ಮೃತದೇಹದ ಮರಣೋತ್ತರ ಪರೀಕ್ಷೆ ಮಂಗಳವಾರ ನಡೆಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

