ಆನ್‌ಲೈನ್ ಶಾಪಿಂಗ್.. ಇಂದಿನ ಕೆಲವರ ಅಚ್ಚುಮೆಚ್ಚಿನ ಕೆಲಸ. ಕೂತಲ್ಲೇ ಬೇಕಾದ್ದನ್ನ ತರಿಸಿಕೊಂಡು ಬಳಸಬಹುದು. ಬಟ್ಟೆ, ಚಪ್ಪಲಿ, ಬ್ಯಾಗ್, ಆರ್ನ್‌ಮೆಂಟ್ಸ್, ತಿಂಡಿಯನ್ನ ಕೂಡ ಆನ್‌ಲೈನ್ ಆರ್ಡರ್ ಹಾಕಬಹುದು. ಆದ್ರೆ ಆನ್‌ಲೈನ್ ಆರ್ಡರ್ ವೇಳೆ ಕೊಂಚ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಅಹಮದಾಬಾದ್‌ನ ಶಾಹೀಬಾಗ್ ಏರಿಯಾದಲ್ಲಿ ರೀಚಾ ಅಮೀನ್ ಎಂಬಾಕೆ ಆನ್‌ಲೈನ್ ಶಾಪಿಂಗ್ ಮಾಡಲು ಬಯಸಿ, ಬಟ್ಟೆ ಖರೀದಿಸಲು ಮುಂದಾಗಿದ್ದರು. ಈ ವೇಳೆ ethnicmania ಎಂಬ ವೆಬ್‌ಸೈಟ್ ಓಪನ್ ಮಾಡಿ ಅದರಲ್ಲಿ 199 ರೂಪಾಯಿಯ ಟಾಪ್ ಆರ್ಡರ್ ಹಾಕಿದ್ದಾರೆ.
ಜುಲೈ 1ಕ್ಕೆ ಬರಬೇಕಿದ್ದ ಟಾಪ್ ಜುಲೈ 8 ಆದರೂ ಬರಲಿಲ್ಲ. ಈ ಕಾರಣಕ್ಕೆ ಈ ವೆಬ್‌ಸೈಟ್‌ನ ಕಸ್ಟಮರ್ ಕೇರ್ ನಂಬರ್‌ಗೆ ಕಾಲ್ ಮಾಡಿದ ರೀಚಾ, ತಾನು ಆರ್ಡರ್ ಹಾಕಿದ ಟಾಪ್ ತನಗೆ ಬಂದು ತಲುಪಲಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಅಲ್ಲಿನ ಸಿಬ್ಬಂದಿ ನೀವು ಖರೀದಿಸಲು ಇಚ್ಛಿಸಿದ್ದ ಟಾಪ್ ಸದ್ಯ ಖಾಲಿಯಾಗಿದೆ. ಹಾಗಾಗಿ ನಿಮ್ಮ ಹಣವನ್ನ ನಿಮಗೆ ಹಿಂದಿರುಗಿಸಲಾಗುವುದು. ಈ ಕಾರಣಕ್ಕೆ ನಿಮ್ಮ ಸಿಸ್ಟಮ್‌ನಲ್ಲಿ ಎನಿ ಡೆಸ್ಕ್ ಎಂಬ ಆ್ಯಪ್ ಡೌನ್‌ಲೌಡ್ ಮಾಡಿಕೊಳ್ಳಿ ಎಂದಿದ್ದಾನೆ.
ತನ್ನ ದುಡ್ಡು ರಿಫಂಡ್ ಮಾಡಿಕೊಳ್ಳಲು ರೀಚಾ ಕಂಪ್ಯೂಟರಿನಲ್ಲಿ ಎನಿ ಡೆಸ್ಕ್ ಆ್ಯಪ್ ಓಪೆನ್ ಮಾಡಿಕೊಂಡಿದ್ದಾರೆ. ಈ ವೇಳೆ ಆಕೆಯ ಡೆಬಿಟ್ ಕಾರ್ಡ್ ಇನ್‌ಫಾರ್ಮೇಷನ್ ಕಲೆಕ್ಟ್ ಮಾಡಿದ ಸಿಬ್ಬಂದಿ, ಆಕೆಯ ಅಕೌಂಟ್‌ನಿಂದ 34ಸಾವಿರ ರೂಪಾಯಿ ಪೀಕಿದ್ದಾನೆ.
ಸದ್ಯ ರೀಚಾ ಶಾಹೀಬಾಗ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕಂಪ್ಲೇಂಟ್ ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.
