ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ ಮುಂದುವರಿದಿದ್ದು, 40 ವರ್ಷದ ಹಿಂದೂ ವಿಧವೆಯ ಮೇಲೆ ಅತ್ಯಾಚಾರ ನಡೆಸಿ, ಮರಕ್ಕೆ ಕಟ್ಟಿಹಾಕಿ, ಕೂದಲು ಕತ್ತರಿಸಿ, ಹಣಕ್ಕೆ ಬೇಡಿಕೆ ಇಟ್ಟಿರುವ ದುಷ್ಕರ್ಮಿಗಳ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅದೇ ದಿನ ಸಂಜೆ, ಢಾಕಾದಲ್ಲಿ ಸ್ಥಳೀಯ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ ರಾಣಾ ಪ್ರತಾಪ್ (45) ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
40 ವರ್ಷದ ಹಿಂದೂ ವಿಧವೆಯೊಬ್ಬರ ಮೇಲೆ ಶಹೀನ್ ಮತ್ತು ಆತನ ಸಹೋದರ ಹಸನ್ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತ ಮಹಿಳೆ ಸುಮಾರು ಎರಡು ವರ್ಷಗಳ ಹಿಂದೆ ಆರೋಪಿಗಳಿಂದಲೇ 20 ಲಕ್ಷ ಟಾಕಾಗೆ ಜಾಗ ಮತ್ತು ಎರಡು ಅಂತಸ್ತಿನ ಮನೆಯನ್ನು ಖರೀದಿಸಿದ್ದಳು. ಮನೆಯಲ್ಲೇ ವಾಸಿಸುತ್ತಿದ್ದ ಮಹಿಳೆಗೆ ಶಹೀನ್ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ಆತನ ಬೇಡಿಕೆಯನ್ನು ತಿರಸ್ಕರಿಸಿದ್ದಕ್ಕೆ ಕೋಪಗೊಂಡ ಆರೋಪಿಗಳು, ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, 50,000 ಟಾಕಾ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಹಿಳೆ ಕಿರುಚಿದಾಗ, ಆಕೆಯನ್ನು ಮರಕ್ಕೆ ಕಟ್ಟಿಹಾಕಿ, ಕೂದಲನ್ನು ಕತ್ತರಿಸಿ, ಆ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂಬ ಆರೋಪವೂ ಇದೆ.
ಚಿತ್ರಹಿಂಸೆಯಿಂದ ಅರೆಪ್ರಜ್ಞಾವಸ್ಥೆಗೆ ತಲುಪಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿ ಜೆನೈದಾ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯ ಅಧೀಕ್ಷಕ ಡಾ. ಎಂ.ಡಿ. ಮುಸ್ತಫಿಝುರ್ ರಹಮಾನ್ ಅವರು, ವೈದ್ಯಕೀಯ ಪರೀಕ್ಷೆಯ ಬಳಿಕ ಮಹಿಳೆಗೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಬಳಿಕ ಸಂತ್ರಸ್ತೆ ಕಲಿಗಂಜ್ ಪೊಲೀಸ್ ಠಾಣೆಯಲ್ಲಿ ಶಹೀನ್ ಮತ್ತು ಹಸನ್ ವಿರುದ್ಧ ದೂರು ದಾಖಲಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ




