ಮಾತಿಗೆ ಮಾತು, ಏಟಿಗೆ ಎದಿರೇಟು, ಕೌಂಟರ್‌ಗೆ ಎನ್‌ಕೌಂಟರ್ ಪದೇ ಪದೇ ಆಗುತ್ತಲೇ ಇದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ನಡುವೆ ಬಹಿರಂಗ ಚರ್ಚೆಯ ಸವಾಲು-ಪ್ರತಿಸವಾಲು ಮತ್ತೆ ತಾರಕಕ್ಕೇರಿದೆ.
DK-HDK ಕೌಂಟರ್ 1
ಎ ಖಾತಾ ಬಿ ಖಾತಾದಲ್ಲಿ ಭ್ರಷ್ಟಾಚಾರ ಆರೋಪ ಮಾಡಿದ್ದ ಹೆಚ್.ಡಿ. ಕುಮಾರಸ್ವಾಮಿಗೆ, ಯಾವುದಾದರೂ ಚಾನಲ್ ಎದುರು ಬನ್ನಿ ಎಂದು ನಾನೇ ಕರೆಯುತ್ತಿದ್ದೇನೆ ಅಂತಾ ಡಿಕೆಶಿ ಓಪನ್ ಚಾಲೆಂಜ್ ಹಾಕಿದ್ರು.
ಈ ಚಾಲೆಂಜ್ ಸ್ವೀಕರಿಸಿರುವ ಹೆಚ್‌ಡಿಕೆ, ಇದೊಂದು ಲೂಟಿ ಯೋಜನೆ ಎಂದು ಜರಿದಿದ್ದಾರೆ. ಮೋಸದ ಬಲೆಗೆ ಬೀಳಬೇಡಿ. ದಾರಿ ತಪ್ಪಬೇಡಿ. ನಿಮ್ ಮನೆ ಹಾಳು ಮಾಡಿಕೊಳ್ಳಬೇಡಿ. ಇಷ್ಟು ವರ್ಷವೇ ಕಾದಿದ್ದೀರಿ. ನಿಮ್ಮನ್ನು ಉಳಿಸುವ ಜವಾಬ್ದಾರಿ ನಮ್ಮದು. ನಮ್ಮ ಸರ್ಕಾರ ಬರುತ್ತದೆ ತಲೆಕೆಡಿಸಿಕೊಳ್ಳಬೇಡಿ ಎಂದು ಜನರಿಗೆ ಭರವಸೆ ನೀಡಿದ್ದಾರೆ. ಜೊತೆಗೆ ಡಿಕೆಶಿ ಚಾಲೆಂಜ್ ಸ್ವೀಕಾರ ಮಾಡ್ತೇನೆ ಎಂಬುದಾಗಿಯೂ ಹೇಳಿದ್ದಾರೆ.
DK-HDK ಕೌಂಟರ್ 2
ಕಾರ್ಖಾನೆ ತರುತ್ತೇನೆ ಅಂತಾರಲ್ಲ. ಜಮೀನು ಎಲ್ಲಿ ಬೇಕೆಂದು ಹೇಳಲಿ. ಮಂಡ್ಯ, ರಾಮನಗರ, ಬಿಡದಿಯಲ್ಲಿ ಮಾಡೋದಾ. ಅವರೇ ಎಲ್ಲಿ ಮಾಡುತ್ತಾರೆಂದು ಲಿಸ್ಟ್ ಕೊಡಲಿ. ಬರೀ ಸುಮ್ಮನೆ ಖಾಲಿ ಮಾತಾಡೋದನ್ನು ನಾವು ಒಪ್ಪುವುದಿಲ್ಲ ಎಂದು ಡಿಕೆಶಿ ವ್ಯಂಗ್ಯವಾಡಿದ್ರು.
ಇದಕ್ಕೆ ಕೌಂಟರ್ ಕೊಟ್ಟಿರುವ ಕುಮಾರಸ್ವಾಮಿ, ಇಲ್ಲಿ ಕೈಗಾರಿಕೆ ನಿರ್ಮಾಣ ಮಾಡೋದು ರಾಜ್ಯ ಸರ್ಕಾರದ ಕೆಲಸ. ನನಗೆ ಕೇಂದ್ರದಲ್ಲಿ ಕೊಟ್ಟಿರುವ ಇಲಾಖೆ ಕಾರ್ಖಾನೆ ತರೋದಲ್ಲ. ನನ್ನ ಬಗ್ಗೆ ಚರ್ಚೆ ಮಾಡೋದಕ್ಕೆ ಯೋಗ್ಯತೆಯೇ ಇಲ್ಲ. ಇದ್ದಿದ್ದು 14 ತಿಂಗಳು ಕೆಲಸ ಮಾಡೋದಕ್ಕೂ ಬಿಡ್ಲಿಲ್ಲ. ತುಂಗಭದ್ರಾ ಡ್ಯಾಂ ಗೇಟ್‌ಗಳನ್ನು ಇಷ್ಟೊತ್ತಿಗೆ ಚೇಂಜ್ ಮಾಡಬೇಕಿತ್ತು. ದುಡ್ಡು ಕೊಡದೇ ಅಲ್ಲಿ ಕೆಲಸ ಆಗಿಲ್ಲ. ಆಂಧ್ರಕ್ಕೆ ನೀರು ಹರಿದು ಹೋಗ್ತಿದೆ. ಮೊದಲು ಗೇಟ್ ಚೇಂಜ್ ಮಾಡಿ, ನೀರು ತಡೆ ಹಿಡಿಯಿರಿ. ಬಳಿಕ ಕುಮಾರಸ್ವಾಮಿ ಜೊತೆ ಚರ್ಚೆಗೆ ಬರುವೆಯಂತೆ ಎಂದು ಏಕವಚನದಲ್ಲೇ ಜರಿದಿದ್ದಾರೆ.
DK-HDK ಕೌಂಟರ್ 3
ಅವರೇನ್ ಬಹಿರಂಗ ಚರ್ಚೆ ಮಾಡ್ತಾರೆ?. ಅವರ ಜೊತೆ ಚರ್ಚೆ ಮಾಡೋಕೆ ಆಗುತ್ತಾ?. ಮಾತನಾಡುವ ಯೋಗ್ಯತೆ ಇಟ್ಟುಕೊಂಡಿದ್ದಾರಾ? ಅವರಂತೆ ದುಡ್ಡು ಹೊಡೆಯುವ ಕೆಲಸ ಮಾಡ್ಲಿಲ್ಲ ಎಂದು ಹೆಚ್‌ಡಿಕೆ ಗುಡುಗಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವಂತಹ ಡಿಕೆ ಶಿವಕುಮಾರ್, ಪ್ರಜಾಪ್ರಭುತ್ವ ವ್ಯವಸ್ಥೆ ಇದು. ಚರ್ಚೆ, ವಾದ, ವಿವಾದ ಎಲ್ಲವೂ ರಾಜಕಾರಣದಲ್ಲಿ ಇರಬೇಕು. ನೀನಾದ್ರೂ ಮಾಡಿದ್ದೀನಿ ಅಂದ್ರೆ, ಸಾಕ್ಷಿಗಳನ್ನು ಇಟ್ಟಿದ್ದೇನೆ ಅಂದ್ರೆ, ಜನರಿಗೆ ರಾಜ್ಯಕ್ಕೆ ಒಳ್ಳೆಯದನ್ನು ಮಾಡಿದ್ದೇನೆ ಅಂದ್ರೆ ಬಂದು ಹೇಳಿ. ನಿಮ್ಮ ಕಮಿಟ್‌ಮೆಂಟ್ ಏನು ಅನ್ನೋದನ್ನ ಹೇಳಿ ಅಂತಾ ಓಪನ್ ಚಾಲೆಂಜ್ ಮಾಡಿದ್ದಾರೆ.
DK-HDK ಕೌಂಟರ್ 4
ಎರಡೂವರೆ ವರ್ಷದ ನಂತರ ನಮ್ಮದೇ ಸರ್ಕಾರ ಬರುತ್ತೆ. ಕ್ರಾಂತಿ, ಬ್ರಾಂತಿ, ವಾಂತಿ ಯಾವುದೂ ಇಲ್ಲ. ನಿಮ್ಮಲ್ಲರ ಶುಭ ಆರೈಕೆಯಲ್ಲಿ ಇದೆ. ಕುಮಾರಸ್ವಾಮಿ ಮುಗಿದೇ ಹೋದ ಅಂದುಕೊಂಡಿದ್ರು. ಮತ್ತೆ ಭಗವಂತನ ಆಶೀರ್ವಾದ ಮತ್ತೆ ನಿಮ್ಮ ಎದುರು ಬಂದಿದ್ದೇನೆ. ಕರ್ನಾಟಕದ ಜನ ಬೇಸತ್ತು ಹೋಗಿದ್ದು, ಮತ್ತೆ ಚುನಾವಣೆಗಾಗಿ ಕಾಯುತ್ತಿದ್ದಾರೆಂದು ಹೆಚ್‌ಡಿಕೆ ಹೇಳಿದ್ರು.
ಇದಕ್ಕೂ ಡಿಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ. ಇಂಥಾ ಡೈಲಾಗ್‌ಗಳು ಎಷ್ಟು ಬಾರಿ ಆಗಿವೆ. ಇವರ ಲೀಡರ್ ಶಿಪ್‌ನಲ್ಲಿ 18ಕ್ಕೆ ಇಳಿದಿದೆ. ಮುಂದೆ 8 ಅಥವಾ 9ಕ್ಕೆ ಇಳಿಯಲಿದೆ ಎಂದು ವ್ಯಂಗ್ಯವಾಡಿದ್ದಾರೆ.
DK-HDK ಕೌಂಟರ್ 5
ಕುಮಾರಸ್ವಾಮಿ ಇದ್ದಿದ್ದು ಒಂದ್ ಬಾರಿ 14 ತಿಂಗಳು ಮತ್ತು ಇನ್ನೊಂದ್ ಬಾರಿ 20 ತಿಂಗಳು ಇದ್ದೆ. ನಿಮ್ ಯೋಗ್ಯತೆಗೆ 50 ವರ್ಷ ಈ ರಾಜ್ಯ ಆಳಿದ್ರಲ್ಲ. ಎಷ್ಟು ಸಬ್ ಸ್ಟೇಷನ್‌ಗಳನ್ನು, ಸ್ಕೂಲ್‌ಗಳನ್ನು ಮಾಡಿದ್ರಿ ಹೇಳಿ ಅಂತಾ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನನ್ನ ಆಡಳಿತದಲ್ಲಿ ಏನ್ ಮಾಡಿದ್ದೇನೆ ಅನ್ನೋದನ್ನು ತೆಗೆದು ನೋಡಿ. ಈಗ ಬೆಂಗಳೂರು ಉದ್ಧಾರ ಮಾಡೋಕೆ 5 ಮೇಯರ್ ಮಾಡ್ತಾರಂತೆ. ಆನೇಕಲ್ಲನ್ನೂ ಸೇರಿಸ್ತಾರಂತೆ. ನಿಮ್ ಯೋಗ್ಯತೆಗೆ ದುಡ್ಡಿಲ್ಲ. ಅವರನ್ನೆಲ್ಲಾ ಸೇರಿಸಿಕೊಂಡು ಏನ್ ಮಾಡ್ತೀರಾ?. ಸಿಎಂ ಮೊನ್ನೆ ಹೇಳಿದ್ರು. 1 ಲಕ್ಷದ 2 ಸಾವಿರ ಕೋಟಿ ಬೆಂಗಳೂರಿಗೆ ಕೊಡ್ತಾರಂತೆ. ಅವರು ಕೊಟ್ರು, ಬೆಂಗಳೂರು ನಗರವನ್ನು ಉದ್ಧಾರ ಮಾಡಿದ್ರು ಎಂದು, ಮಾಧ್ಯಮಗಳ ಎದುರು ವ್ಯಂಗ್ಯವಾಡಿದ್ರು.
ಇದಕ್ಕೆ ಸ್ವಲ್ಪ ಖಾರವಾಗೇ ಡಿಕೆಶಿ ಉತ್ತರ ನೀಡಿದ್ದಾರೆ. ಜನ ನಿಮಗೆ ವೋಟ್ ಹಾಕಿದ್ದಾರಲ್ವಾ. ದೊಡ್ಡ ದೊಡ್ಡ ಸ್ಥಾನ ಬಂದಿದೆ ಅಲ್ವಾ. ಬನ್ನಿ ಸಾರ್ವಜನಿಕರ ಎದುರು ಉತ್ತರ ಕೊಡಿ. ಎಲ್ಲರನ್ನೂ ಹೆದರಿಸಿಕೊಂಡು, ಬರೀ ಹಿಟ್ ಅಂಡ್ ರನ್ ಮಾಡ್ಕೊಂಡು ಹೋಗೋದಲ್ಲ ಅಂತಾ ವಾಗ್ದಾಳಿ ನಡೆಸಿದ್ದಾರೆ. ಅಸೆಂಬ್ಲಿಯಲ್ಲಿ ಅದೇನೋ ಪೆನ್‌ಡ್ರೈವ್ ತೆಗೀತಿನಿ ಅಂತಾರಲ್ಲ ಆ ರೀತಿ ಇದಲ್ಲ. ದಯವಿಟ್ಟು ಬನ್ನಿ ಅವಮಾನ ಆಗೋದಿಲ್ಲ. ನೀವು ಸಿಎಂ ಆಗಿದ್ದಾಗ ಸಾತನೂರಿಗೆ ನಾನು ಬಂದಿರಲಿಲ್ವಾ. ನಂದೇನು ಉಳುಕಿದೆ ನಿಂದೇನು ಉಳುಕಿದೆ ಹೇಳು. ನಾನೇನು ಮಾಡಿದ್ದೀನಿ, ನೀನೇನು ಮಾಡಿದ್ದೀಯಾ ಮಾತಾಡೋಣ. ಎಷ್ಟೋ ಜನ ಏನೇನೋ ಬಿಚ್ಚಿದ್ರೂ, ಯಾರು ಬೇಡ ಅನ್ನೋರು. ಜೊತೆಯಲ್ಲಿ ಇಡೀ ಕೇಂದ್ರ ಸರ್ಕಾರವೇ ಇದಿಯಲ್ಲ. ಇದೆಕ್ಕೆಲ್ಲಾ ಡಿ.ಕೆ. ಶಿವಕುಮಾರ್ ಹೆದರುವ ಮಗನೇ ಅಲ್ಲ ಅಂತಾ ಡಿಕೆಶಿ ತಿರುಗೇಟು ಕೊಟ್ಟಿದ್ದಾರೆ.
ಒಟ್ನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ವಾಕ್ಸಮರ ಸದ್ದಕ್ಕಂತೂ ಮುಗಿಯುವಂತೆ ಕಾಣ್ತಿಲ್ಲ.

