ರಾಜ್ಯಾದ್ಯಂತ ಜಾತಿ ಸಮೀಕ್ಷೆ ಕಾರ್ಯ ಚುರುಕಾಗಿ ನಡೆಯುತ್ತಿದೆ. ಇದರ ಜವಾಬ್ದಾರಿಯನ್ನು ಸರ್ಕಾರ ಇದೀಗ ಬೆಸ್ಕಾಂ ಸಿಬ್ಬಂದಿಗೆ ನೀಡಿರುವ ಕಾರಣ ಬೆಂಗಳೂರು ನಗರದಲ್ಲಿ ಜನರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.
2025ರ ಆಗಸ್ಟ್ 23ರಿಂದ ರಾಜ್ಯ ಸರ್ಕಾರ, ಬೆಂಗಳೂರಿನಲ್ಲಿ ಮೀಟರ್ ರೀಡರ್ಗಳಿಗೆ ಜಿಯೋ ಟ್ಯಾಗಿಂಗ್ ಕೆಲಸವನ್ನು ನೀಡಿದ್ದು, ಈ ಮೂಲಕ ಜಾತಿ ಸಮೀಕ್ಷೆಯ ಹೊಣೆದಾರರನ್ನಾಗಿ ಮಾಡಲಾಗಿದೆ. ಈ ಹೊಸ ಜವಾಬ್ದಾರಿಯಿಂದಾಗಿ, ಮೀಟರ್ ರೀಡರ್ಗಳು ಸಮಯಕ್ಕೆ ಮೀಟರ್ ರೀಡಿಂಗ್ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಇದರಿಂದಾಗಿ ಎರಡು ತಿಂಗಳಿನಿಂದ ವಿದ್ಯುತ್ ಬಿಲ್ ಅಚ್ಚರಿಯಂತೆಯೇ ಹೆಚ್ಚಾಗಿದೆ ಎಂಬ ಮಾತು ಹರಡಿದೆ.
ಪ್ರತಿ ತಿಂಗಳ 11 ಅಥವಾ 12ರಂದು ರೀಡಿಂಗ್ ತೆಗೆದು ಬಿಲ್ ನೀಡುತ್ತಿದ್ದ ಸಿಬ್ಬಂದಿ ಇದೀಗ ಬಿಲ್ ನೀಡುವುದೇ ತಡವಾಗುತ್ತಿದೆ. ಈ ವಿಳಂಬದಿಂದ ಗ್ರಾಹಕರಿಗೆ ಹೆಚ್ಚು ಬಿಲ್ ಬರುವಂತಾಗಿದೆ ಎಂದು ಬೇಸರ ವ್ಯಕ್ತವಾಗಿದೆ. ಇನ್ನು ಸರ್ಕಾರದ ಗೃಹಜ್ಯೋತಿ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುತ್ತಿದ್ರೂ, ಇತ್ತೀಚೆಗೆ ಜನರಿಗೆ ಹೆಚ್ಚು ಬಿಲ್ ಬಂದು ಆರ್ಥಿಕ ಬವಣೆ ಉಂಟಾಗಿದೆ ಎಂಬ ಅಸಮಾಧಾನ ಮೂಡಿದೆ.
ಬಿಲ್ ನಿಗದಿತ ಅವಧಿಯಲ್ಲಿ ಕೊಡಬೇಕಾಗಿದ್ದ ಬೆಸ್ಕಾಂ, ಗ್ರಾಹಕರಿಗೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ, ಸರ್ಕಾರ ಅಥವಾ ಸಂಸ್ಥೆ ಇದೀಗ ಯಾವ ರೀತಿಯ ಪರಿಹಾರ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ. ಸಮಸ್ಯೆಗೆ ಯಾವ ರೀತಿ ಪರಿಹಾರ ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ