Sunday, July 6, 2025

Latest Posts

ಜಾತಿ ಗಣತಿ ವರದಿ ಜಾರಿಯಲ್ಲಿ ಇಡೋ ತಪ್ಪು ಹೆಜ್ಜೆ ಕಾಂಗ್ರೆಸ್‌ಗೆ ಅಪಾಯ : ಜಾರಕಿಹೊಳಿ ಶಾಕಿಂಗ್‌ ಹೇಳಿಕೆ –

- Advertisement -

ಬೆಂಗಳೂರು : ರಾಜ್ಯದಲ್ಲಿ ಜಾತಿ ಗಣತಿ ಜಾರಿಯ ವಿಚಾರಕ್ಕೆ ಸಂಬಂಧಿಸಿದ್ದಂತೆ ಸಮುದಾಯಗಳು ಹಾಗೂ ಸರ್ಕಾರದ ನಡುವೆ ತೀವ್ರ ಜಟಾಪಟಿ ಮುಂದುವರೆದಿದೆ. ಪ್ರಬಲ ಸಮುದಾಯಗಳು ಇದನ್ನು ವಿರೋಧಿಸಿದ್ದರೆ, ಹಿಂದುಳಿದ ಹಾಗೂ ದಲಿತ ಸಮುದಾಯಗಳು ಇದಕ್ಕೆ ಬೆಂಬಲ ಸೂಚಿಸುತ್ತಿವೆ. ಅಲ್ಲದೆ ಸರ್ಕಾರದಲ್ಲಿನ ಸಚಿವರು ಸಹ ಸಮುದಾಯಗಳ ಮಾರ್ಗಾದರ್ಶನದಲ್ಲಿ ಸಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಈ ಎಲ್ಲದರ ನಡುವೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ ನಾಯಕರಿಗೆ ಹೇಳಿರುವ ಕಿವಿಮಾತು ಮಹತ್ವ ಪಡೆದುಕೊಂಡಿದೆ.

ಇನ್ನೂ ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ವಿವಾದಿತ ಜಾತಿ ಗಣತಿ ವರದಿ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧತೆ ಕಡಿಮೆಯಾಗಿದೆ. ಅಲ್ಲದೆ ಹಲವು ಸಂಕೀರ್ಣ ಸಮಸ್ಯೆಗಳ ಕಾರಣದಿಂದ ನಿರ್ಧಾರ ಪಡೆಯಲು ಒಂದು ವರ್ಷದಷ್ಟು ಸಮಯ ತೆಗೆದುಕೊಳ್ಳಬಹುದು. ಈ ಜಾತಿ ಗಣತಿ ವರದಿಯ ಕುರಿತು ವಿವಿಧ ಜಾತಿಗಳು ಎತ್ತಿರುವ ಆತಂಕಗಳನ್ನು ಪರಿಹರಿಸುವಲ್ಲಿ ಯಾವುದೇ ತಪ್ಪು ದಾರಿ ತುಳಿದರೆ ಭವಿಷ್ಯದ ದಿನಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಅವರು ವಾರ್ನಿಂಗ್‌ ಮಾಡಿದ್ದಾರೆ.

ಇಂದು ನಾಳೆ ಆಗುವ ವಿಚಾರವಲ್ಲ..

ಜಾತಿ ಗಣತಿ ವರದಿಯ ಕುರಿತು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರದಲ್ಲಿನ ಗೊಂದಲಗಳ ಕಾರಣ ಯಾವುದೇ ರೀತಿಯ ಸ್ಪಷ್ಟ ನಿರ್ಧಾರ ಕೈಗೊಳ್ಳು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಮೇ 2ರಂದು ಈ ವಿಚಾರವಾಗಿ ಚರ್ಚೆ ನಡೆಸಲು ಸಂಪುಟ ಸಭೆಯನ್ನು ಕರೆಯಲಾಗಿದೆ. ಆ ವೇಳೆ ಜಾತಿ ಗಣತಿ ವರದಿಯ ಬಗ್ಗೆ ಸಮಗ್ರವಾಗಿ ಎಲ್ಲರೂ ಅವರವರ ಅಭಿಪ್ರಾಯ ಮಂಡಿಸುತ್ತೇವೆ. ಇನ್ನೂ ಈ ಜಾತಿ ಗಣತಿ ವರದಿ ನಾಳೆಯೇ ಜಾರಿ ಆಗುತ್ತದೆ ಎಂದು ನಿರೀಕ್ಷೆ ಮಾಡುವದು ಬೇಡ. ಅದು ಇಂದು ಅಥವಾ ನಾಳೆಯಾಗುವ ವಿಚಾರವಲ್ಲ, ಬದಲಿಗೆ ಒಂದು ವರ್ಷವಾದರೂ ತೆಗೆದುಕೊಳ್ಳಬಹುದು. ಯಾಕೆಂದರೆ ಅದರಲ್ಲಿ ಹಲವಾರು ಜಟಿಲವಾದ ಸಮಸ್ಯೆಗಳಿವೆ, ಅದಕ್ಕಾಗಿ ಎಲ್ಲರನ್ನು ವಿಶ್ವಾಸಕ್ಕೆ ಪಡೆಯಬೇಕಾಗುತ್ತದೆ. ಇದಕ್ಕಾಗಿ ಅವರೊಂದಿಗೆ ಸರಣೆ ಸಭೆಗಳನ್ನು ಮಾಡಬೇಕಾಗುತ್ತದೆ. ಅಂದಹಾಗೆ ಸರ್ಕಾರವೂ ಕೂಡ ರಾಜಿ ಭಾವನೆಯಲ್ಲಿರಬೇಕು. ಇದನ್ನು ಇದ್ದಕ್ಕಿದ್ದಂತೆ ಜಾರಿ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ತಜ್ಷರ ಅಭಿಪ್ರಾಯ ಪಡೆಯಬೇಕಿದೆ..

ಇನ್ನೂ ಸಂಪುಟದಲ್ಲಿ ಮಂತ್ರಿಗಳ ನಡುವಿನ ಮಾತಿನ ಚಕಮಕಿಯ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಸಾದರ ಲಿಂಗಾಯತ ಸಮುದಾಯದ ಜನಸಂಖ್ಯೆಯ ಕುರಿತು ಚರ್ಚೆಯ ಉದಾಹರಣೆಯನ್ನು ಎತ್ತಿದರು. ಅಲ್ಲದೆ ಈ ಸಮುದಾಯ 65,000 ಎಂದು ತೋರಿಸಲಾಗಿದೆ ಹಾಗೂ ಹಾವೇರಿ, ದಾವಣಗೆರೆ, ಚಿತ್ರದುರ್ಗ ಮತ್ತು ಭಾಗಶಃ ಶಿವಮೊಗ್ಗ ಜಿಲ್ಲೆಗಳಲ್ಲಿ ಸಮುದಾಯ ಇರುವ ಬಗ್ಗೆ ಸೂಚಿಸುವ ಕೆಲವು ಸಚಿವರು, ಈ ಸಂಖ್ಯೆಗಳಿಗೆ ಬೇಸರ ವ್ಯಕ್ತಪಡಿಸಿದರು. ಕೆಲವು ಸಚಿವರು ಸ್ಪಷ್ಟೀಕರಣ ನೀಡಲು ಪ್ರಯತ್ನಿಸುತ್ತಿರುವಾಗ ಸಮುದಾಯದ ಅನೇಕರು ಸಮೀಕ್ಷೆಯ ಸಮಯದಲ್ಲಿ ಹಿಂದೂ-ಸಾದರ ಎಂದು ನೋಂದಾಯಿಸಿಕೊಂಡಿದ್ದಾರೆ ಮತ್ತು ಅವರನ್ನು ವಿಭಿನ್ನ ವರ್ಗದ ಅಡಿಯಲ್ಲಿ ಪರಿಗಣಿಸಲಾಗಿದೆ, ಇದು ಜನಸಂಖ್ಯಾ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದರು. ಹೀಗಾಗಿ ಈ ರೀತಿಯ ವಿಷಯಗಳಿವೆ, ಇವುಗಳನ್ನು ಹೊಂದಿಸಿಕೊಂಡು ಚರ್ಚಿಸಲು ಸಮಯ ಬೇಕಾಗುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆ ತಜ್ಞರು ಮತ್ತು ಸಮುದಾಯದ ಅಭಿಪ್ರಾಯವನ್ನು ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.

ಮೀಸಲಾತಿ ಹೆಚ್ಚಳ ಕಷ್ಟ..!

ಅಲ್ಲದೆ ಒಬಿಸಿ ಮೀಸಲಾತಿ ಪ್ರಮಾಣವನ್ನು ಶೇಕಡಾ. 32 ರಿಂದ 51ಕ್ಕೆ ಹಾಗೂ ಒಟ್ಟಾರೆ ಮೀಸಲಾತಿಯನ್ನು ಶೇಕಡಾ. 56 ರಿಂದ 75ಕ್ಕೆ ಹೆಚ್ಚಳ ಮಾಡಲು ವರದಿಯಲ್ಲಿ ಶಿಫಾರಸು ನೀಡಲಾಗಿದೆ. ಮೀಸಲಾತಿ ಏರಿಕೆ ಮಾಡುವುದು ಈಗ ಸಾಧ್ಯವಿಲ್ಲದ ಮಾತಾಗಿದೆ. ಇನ್ನೂ ಈ ಮೀಸಲಾತಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್‌ ಮಿತಿಯನ್ನು ನಿಗದಿ ಪಡಿಸಿದೆ. ತಮಿಳುನಾಡಿನಲ್ಲಿ ಮೀಸಲಾತಿ ಪ್ರಕರಣ ಹಲವು ವರ್ಷದಿಂದ ಕೋರ್ಟ್‌ನಲ್ಲಿದೆ. ಹೀಗಾಗಿ ಎಲ್ಲವನ್ನೂ ನೋಡಿಕೊಂಡು ಹೆಚ್ಚಳ ಮಾಡಬೇಕು. ಮೀಸಲಾತಿ ಹೆಚ್ಚಳ ಆಗುವುದೇ ಇಲ್ಲ ಎಂದು ಅಲ್ಲ. ಸದ್ಯಕ್ಕೆ ಅಂಕಿ-ಅಂಶ ಎಲ್ಲವನ್ನೂ ಸರಿಪಡಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕಾಗಿದೆ. ಕೆಲವೊಂದು ಸಮುದಾಯಗಳಿಗೆ ಈ ಅಂಕಿ ಅಂಶಗಳು ಸಮಾಧಾನ ತಂದಿರುವುದಿಲ್ಲ. ಅದನ್ನು ಸರಿಪಡಿಸಿ ಎಲ್ಲ ವರ್ಗಕ್ಕೂ ನ್ಯಾಯ ಒದಗಿಸಬೇಕಿದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.

 

- Advertisement -

Latest Posts

Don't Miss