‘ಪ್ರೀತಿ ಅಂದ್ರೆ ಉಸಿರು’ ಅಂತಾರೆ. ಆದರೆ ಇಂದಿನ ಕೆಲವರ ಪ್ರೇಮ ಕಥೆಗಳು ಕೇಳಿದರೆ ಉಸಿರೇ ನಿಂತುಹೋಗುವಂತಿದೆ. ಪ್ರೀತಿಯ ನೋವನ್ನು ಸಹಿಸಿಕೊಳ್ಳಲಾಗದೆ ಯುವಕನೊಬ್ಬ ದುರಂತ ಅಂತ್ಯ ಕಂಡ ಘಟನೆ ತುಮಕೂರಿನಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ನವಲಿ ಗ್ರಾಮದ ಸುರೇಶ್ (20) ಎಂಬ ಯುವಕ, ತುಮಕೂರಿನ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದ. ಕಾಲೇಜಿನ ಹಿರಿಯ ವಿದ್ಯಾರ್ಥಿನಿಯೊಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ. ಆಕೆ ಆತನ ಪ್ರೀತಿ ಒಪ್ಪದಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುರೇಶ್ ತನ್ನ ಸ್ನೇಹಿತರೊಂದಿಗೆ ತುಮಕೂರಿನಲ್ಲಿ ರೂಮ್ ಮಾಡಿಕೊಂಡು ವಾಸಿಸುತ್ತಿದ್ದ. ಪ್ರೀತಿಯ ವಿಷಯದಲ್ಲಿ ನಿರಾಸೆ ಅನುಭವಿಸಿದ ನಂತರ ಅವನು ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಯಾವಾಗ ತಾನು ಪ್ರೀತಿಸಿದ ಹುಡಗಿ ಇವ್ನ ಕಡೆ ತಿರುಗಿ ನೋಡಲಿಲ್ವೋ ಆಗ ಸುರೇಶ ಹುಚ್ಚನಂತಾಗಿದ್ದ. ಯಾವಾಗ್ಲೂ ಹುಡ್ಗಿ ನೆನಪಲ್ಲೇ ದಿನ ಕಳೆಯುತ್ತಿದ್ದ.
ಇವ್ನ ಅವಸ್ಥೆ ಕಂಡು ಸ್ನೇಹಿತರೆಲ್ಲಾ ರೂಂ ಖಾಲಿ ಮಾಡಿದ್ರು. ಇದರಿಂದ ಮತ್ತಷ್ಟು ಖಿನ್ನತೆಗೆ ಜಾರಿದ್ದ ರಾತ್ರಿ ವೇಳೆ “ಮೈ ಡಿಯರ್ ಲೈಫ್… ಗುಡ್ ಬೈ… ರಿಪ್” ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ ಬಳಿಕ, ರೂಮಿನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯುವಕನ ತಂದೆ ಬಸವರಾಜು ಅವರು ಈ ಬಗ್ಗೆ ಮಾತನಾಡಿದ್ದಾರೆ. ಕೆಲವರು ಬಂದು, ನಿಮ್ಮ ಮಗ ಇಂತಹ ಸ್ಟೇಟಸ್ ಹಾಕಿದ್ದಾನೆ ಎಂದು ಹೇಳಿದ್ರು. ರೂಮಿಗೆ ಬಂದು ನೋಡಿದರೆ ಅವನು ಸಾವನ್ನಪ್ಪಿದ್ದ ಎಂದು ಈ ತಂದೆ ಭಾವುಕರಾಗಿದ್ದಾರೆ. ತಮ್ಮ ಮಗ ಓದಿ ದೊಡ್ಡವನಾಗಲಿ, ಸುಖ ಜೀವನ ನಡೆಸಲಿ ಎಂಬ ಕನಸು ಕಂಡು ಆ ಮಗನನ್ನು ಬೆಳೆಸಿದ್ದ ಪೋಷಕರು, ಈಗ ಆ ಮಗನ ಮೃತ ದೇಹವನ್ನು ನೋಡಬೇಕಾದ ಪರಿಸ್ಥಿತಿ ಎದುರಾಗಿದೆ.
ವರದಿ : ಲಾವಣ್ಯ ಅನಿಗೋಳ

