ಹೆಲ್ಮೆಟ್ ಹಾಕಲ್ವ? ಹಾಗಾದ್ರೆ ನಿಮ್ಮ ಲೈಸೆನ್ಸ್ ಕ್ಯಾನ್ಸಲ್

ಒಂದು ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸಲಾಗುತ್ತದೆ. ನೂತನ ತಿದ್ದುಪಡಿ ನಿಯಮದಂತೆ, ಪರವಾನಗಿ ಅಮಾನತು ಅವಧಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿಗಳ ಸಕ್ಷಮ ಅಧಿಕಾರಿಗಳು ನಿರ್ಧರಿಸಲಿದ್ದಾರೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳ ನಿಯಮಗಳಿಗೆ ತಿದ್ದುಪಡಿ ಮಾಡಿ ಬುಧವಾರ ಸುತ್ತೋಲೆ ಹೊರಡಿಸಿದೆ. ಈ ನೂತನ ನಿಯಮಗಳು ಜನವರಿ 20ರಿಂದಲೇ ಜಾರಿಗೆ ಬಂದಿವೆ. ಆದರೆ, ಜನವರಿ 1ರಿಂದ ನಡೆದಿರುವ ಸಂಚಾರ ನಿಯಮ ಉಲ್ಲಂಘನೆಗಳನ್ನು ಪರಿಗಣಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ. ಹಿಂದಿನ ವರ್ಷಗಳ ಉಲ್ಲಂಘನೆಗಳನ್ನು ಪರಿಗಣಿಸುವುದಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.

ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿಗಳು ಅಥವಾ ರಾಜ್ಯ ಸರ್ಕಾರದಿಂದ ನಿಯುಕ್ತರಾದ ಯಾವುದೇ ಅಧಿಕೃತ ಅಧಿಕಾರಿಗಳು ಚಲನ್ ನೀಡಬಹುದು. ಇ-ಚಲನ್ ನೀಡುವ ವ್ಯವಸ್ಥೆಯೂ ಮುಂದುವರಿಯಲಿದೆ. ಸಂಚಾರ ನಿಯಮ ಉಲ್ಲಂಘಿಸಿದವರು 45 ದಿನಗಳ ಒಳಗಾಗಿ ದಂಡ ಪಾವತಿಸಬಹುದು ಅಥವಾ ಉಲ್ಲಂಘನೆ ಆರೋಪ ದೋಷಪೂರಿತವಾಗಿದೆ ಎಂದು ಆಕ್ಷೇಪಣೆ ಸಲ್ಲಿಸಬಹುದು. 45 ದಿನಗಳೊಳಗೆ ಯಾವುದೇ ಅರ್ಜಿ ಸಲ್ಲಿಸದಿದ್ದರೆ, ನಿಯಮ ಉಲ್ಲಂಘನೆಯನ್ನು ಒಪ್ಪಿಕೊಂಡಂತೆ ಪರಿಗಣಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಈವರೆಗೆ ಅಜಾಗರೂಕ ಚಾಲನೆ, ಪ್ರಯಾಣಿಕರ ಮೇಲೆ ಹಲ್ಲೆ ಸೇರಿದಂತೆ ಅಧಿಸೂಚಿತ 24 ಗಂಭೀರ ಸಂಚಾರ ನಿಯಮ ಉಲ್ಲಂಘನೆಗಳಾಗಿದ್ದರೆ ಮಾತ್ರ ಚಾಲನಾ ಪರವಾನಗಿ ಅಮಾನತು ಮಾಡುವ ಶಿಸ್ತುಕ್ರಮ ಜಾರಿಯಾಗುತ್ತಿತ್ತು. ಆದರೆ, ನೂತನ ನಿಯಮದಂತೆ ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಚಾಲನೆ,
ಸಿಗ್ನಲ್ ಜಂಪ್, ಸೀಟ್ ಬೆಲ್ಟ್ ಧರಿಸದೇ ಪ್ರಯಾಣ ಇವನ್ನೂ ಸಂಚಾರ ನಿಯಮ ಉಲ್ಲಂಘನೆಗಳೆಂದು ಪರಿಗಣಿಸಿ, ಶಿಸ್ತುಕ್ರಮ ಜರುಗಿಸಲು ಅವಕಾಶ ಕಲ್ಪಿಸಲಾಗಿದೆ.

ವರದಿ : ಲಾವಣ್ಯ ಅನಿಗೋಳ

About The Author