ಯುವ ರೈತರಿಗೆ ವಧು ಸಿಗುತ್ತಿಲ್ಲ! ₹5 ಲಕ್ಷ ಪ್ರೋತ್ಸಾಹ ಧನ ಬೇಡಿಕೆ

ಮಂಡ್ಯ: ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಸರ್ಕಾರದಿಂದ ₹5 ಲಕ್ಷ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿ ರೈತ ಮಕ್ಕಳು ಹಾಗೂ ಬಿಜೆಪಿ ಕಾರ್ಯಕರ್ತರು ಮಂಡ್ಯದಲ್ಲಿ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಯುವ ರೈತರು ಮತ್ತು ಬಿಜೆಪಿ ಕಾರ್ಯಕರ್ತರು, ವರನ ವೇಷದಲ್ಲಿ ಹಣೆಗೆ ಬಾಸಿಂಗ ಹಾಗೂ ತಲೆಗೆ ಮೈಸೂರು ಪೇಟ ಧರಿಸಿ ಅಣುಕು ಪ್ರದರ್ಶನ ನಡೆಸಿ ತಮ್ಮ ಬೇಡಿಕೆಯನ್ನು ವಿಶಿಷ್ಟವಾಗಿ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕೃಷಿಯನ್ನು ಅವಲಂಬಿಸಿಕೊಂಡು ಬದುಕು ಕಟ್ಟಿಕೊಳ್ಳಲು ಇಚ್ಛಿಸುವ ಯುವ ರೈತರಿಗೆ ವಧು ದೊರಕುವುದು ಕಷ್ಟವಾಗುತ್ತಿದೆ. ಇದರಿಂದ ಅನೇಕ ಯುವ ರೈತರು ಸಾಮಾಜಿಕ ಹಾಗೂ ಕುಟುಂಬ ಜೀವನದಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು. ಹೀಗಾಗಿ, ಶಾದಿ ಭಾಗ್ಯ ಯೋಜನೆಯ ಮಾದರಿಯಲ್ಲಿ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ₹5 ಲಕ್ಷ ಪ್ರೋತ್ಸಾಹ ಧನ ನೀಡುವ ವಿಶೇಷ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ಈ ಯೋಜನೆಯನ್ನು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಹಳೆ ಮೈಸೂರು ಭಾಗ ಎಂಬ ತಾರತಮ್ಯವಿಲ್ಲದೆ ಅಖಂಡ ಕರ್ನಾಟಕದ ಎಲ್ಲ ಭಾಗಗಳಿಗೂ ಅನ್ವಯವಾಗುವಂತೆ ರೂಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author