ಮಧ್ಯಪ್ರದೇಶದ ಭೋಪಾಲ್ನಲ್ಲಿ ಸಚಿನ್ ಎಂಬ ಹೆಸರಿನಲ್ಲಿ ಹಿಂದೂ ಯುವತಿಯನ್ನು ಬಲೆಗೆ ಬೀಳಿಸಿ ಅತ್ಯಾಚಾರ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಶಾದ್ ಸಿದ್ದಿಖಿ ಎಂಬ ಯುವಕ ತನ್ನ ನಿಜವಾದ ಗುರುತನ್ನು ಮುಚ್ಚಿಟ್ಟು ಹಿಂದೂ ಹುಡುಗಿಯರ ಮೇಲೆ ಮೋಸ ಮಾಡುತ್ತಿದ್ದಾನೆ ಎಂಬ ಆರೋಪ ಎದುರಿಸುತ್ತಿದ್ದಾನೆ. ಆತ ತನಗೆ ಮಚಲಿ ಗ್ಯಾಂಗ್ ಸದಸ್ಯತ್ವವಿದೆ ಹಾಗೂ ಹಿಂದೂ ಯುವತಿಯರನ್ನು ಗರ್ಭಿಣಿಯರನ್ನಾಗಿ ಮಾಡುವುದು ತನ್ನ ಫ್ಯಾಷನ್ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾನೆ.
ಪೊಲೀಸರ ಪ್ರಕಾರ, 26 ವರ್ಷದ ಹಿಂದೂ ಯುವತಿಗೆ ಕೆಲಸದ ನೆಪದಲ್ಲಿ ಶಾದ್ ಸಿದ್ದಿಖಿ ಸಚಿನ್ ಎಂಬ ಹೆಸರಿನಿಂದ ಹತ್ತಿರವಾದ. ಎರಡು ವರ್ಷಗಳ ಹಿಂದೆ ಉದ್ಯೋಗ ಹುಡುಕಿಕೊಂಡು ಭೋಪಾಲ್ಗೆ ಬಂದಿದ್ದ ಯುವತಿ, ನಂತರ ಇಂದೋರ್ನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಆರಂಭಿಸಿದಳು. ಈ ಅವಧಿಯಲ್ಲಿ ಸಿದ್ದಿಖಿ ಆಕೆಯೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡ. ಜನವರಿ 3ರಂದು ಆತ ಯುವತಿಯ ಮನೆಗೆ ಭೇಟಿ ನೀಡಿ, ಮೌತ್ ಫ್ರೆಷ್ನರ್ ನೀಡಿದ ನಂತರ ಆಕೆಗೆ ತಲೆತಿರುಗು ಕಾಣಿಸಿಕೊಂಡಿತು. ಅದೇ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಅತ್ಯಾಚಾರ ಎಸಗಿ, ವಿಡಿಯೋ ರೆಕಾರ್ಡ್ ಮಾಡಿದ್ದಾನೆ.
ಯುವತಿ ವಿರೋಧ ವ್ಯಕ್ತಪಡಿಸಿದಾಗ ಆತ ಶೀಘ್ರದಲ್ಲೇ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದ. ಆದರೆ ಕೆಲ ದಿನಗಳ ಬಳಿಕ ಆತ ಮುಸ್ಲಿಂ ಎಂಬ ನಿಜ ವಿಷಯ ಆಕೆಗೆ ತಿಳಿಯುತ್ತದೆ. ಪ್ರಶ್ನಿಸಿದಾಗ ಆತ ತನ್ನ ಗುರುತನ್ನು ಬಹಿರಂಗಪಡಿಸಿ, ನನ್ನೊಂದಿಗೆ ಇರಬೇಕಾದರೆ ನೀನು ಮತಾಂತರಗೊಳ್ಳಬೇಕು ಎಂದು ಒತ್ತಡ ಹೇರಿದ್ದಾನೆ. ಅಲ್ಲದೆ ಬುರ್ಖಾ ಧರಿಸುವಂತೆ ಬಲವಂತಪಡಿಸುತ್ತಾ, ನಿರಂತರ ಬೆದರಿಕೆ ಹಾಕಿದ್ದಾನೆ.
ಇಂತಹ ಕಿರುಕುಳದಿಂದ ಬೇಸತ್ತು ಯುವತಿ ಕರ್ಣಿ ಸೇನಾ ಕಚೇರಿಗೆ ತೆರಳಿ ರಾಜ್ಯಾಧ್ಯಕ್ಷ ಶೈಲೇಂದ್ರ ಸಿಂಗ್ ಅವರಿಗೆ ಘಟನೆಯ ವಿವರ ನೀಡಿದಳು. ನಂತರ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

