ಶಿವಮೊಗ್ಗ : ಮೈಸೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷದ ಶಾಸಕರ ಬಲ ಕುಸಿಯುತ್ತಿದೆ. ಜೆಡಿಎಸ್ 58 ಸ್ಥಾನಗಳನ್ನು ಪಡೆದಿತ್ತು. ಆ ಬಳಿಕ ಅದರಲ್ಲಿ ಇಳಿಕೆಯಾಗುತ್ತ ಬರುತ್ತಿದೆ. ಜೆಡಿಎಸ್ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.
ಆದರೆ ಇದೇ ವಿಚಾರಕ್ಕೆ ಸಿದ್ದರಾಮಯ್ಯ ಅವರಿಗೆ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೌಂಟರ್ ನೀಡಿದ್ದಾರೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸಿಎಂ ಮುಖ್ಯಮಂತ್ರಿಯವರಿಗೆ ಉತ್ತರ ನೀಡುತ್ತೇವೆ ಎಂದು ಗುಡುಗಿದ್ದಾರೆ.
ಜಿಲ್ಲೆಯಲ್ಲಿಂದು ಮಾತನಾಡಿ, ಸಾಧನಾ ಸಮಾವೇಶದಲ್ಲಿ ಸಿಎಂ ಒಂದು ಸವಾಲು ಹಾಕಿದ್ದಾರೆ. 2004 ರಲ್ಲಿ ಜನತಾದಳ ಪಕ್ಷ 58 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ ಅಲ್ಲಿಂದ ಶಾಸಕರ ನಂಬರ್ ಕುಸಿಯುತ್ತಿದೆ ಎಂದು ಬಹಳ ಲಘವಾಗಿ ಮಾತನಾಡಿದ್ದಾರೆ. ಆದರೆ ಇಂದಿನಿಂದ ನಾವೆಲ್ಲರೂ ಈ ಹೋರಾಟವನ್ನು ಕೈಗೆತ್ತಿಕೊಳ್ಳೋಣ. ಇದರಿಂದ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಇದಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮೂಲಕ ಅವರಿಗೆ ತಕ್ಕ ಉತ್ತರ ನೀಡೋಣ ಎಂದು ಕರೆ ನೀಡಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹಾಗೂ ಹೆಚ್.ಡಿ ಕುಮಾರಸ್ವಾಮಿಯವರು ಕಡಿಮೆ ಅವಧಿ ಅಧಿಕಾರದಲ್ಲಿದ್ದರು. ಆಗ ಅವರು ನೀಡಿರುವ ಯೋಜನೆಗಳು, ಕೊಡುಗೆಗಳು ಇಡೀ ದೇಶದ ಉದ್ದಗಲ್ಲಕ್ಕೂ ಹಾಗೂ ಈ ರಾಜ್ಯದಲ್ಲಿಯೂ ಇಂದಿನವರೆಗೆ ಚರ್ಚೆಯಾಗುತ್ತಿವೆ ಎಂದು ನಿಖಿಲ್ ಕುಮಾರಸ್ವಾಮಿ ದಳಪತಿಗಳ ಜನಪರ ಯೋಜನೆಗಳನ್ನು ಸ್ಮರಿಸಿದ್ದಾರೆ.