ಕೇಂದ್ರ ಸಚಿವ ವಿ. ಸೋಮಣ್ಣ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ತಲೆ ಇಲ್ಲ, ಬುಡ ಇಲ್ಲ. ಗಾಂಭೀರ್ಯತೆ ಅನ್ನೋದೇ ಗೊತ್ತಿಲ್ಲ. ಇಚ್ಛಾಶಕ್ತಿ ಇಲ್ಲದ, ಸಮಸ್ಯೆ ಅರಿವಿಲ್ಲದ ಮೊಂಡುತನದ ವ್ಯವಸ್ಥೆ ಸಿದ್ದರಾಮಯ್ಯರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಚಾಟಿ ಬೀಸಿದರು.
ತಮ್ಮ 50 ವರ್ಷದ ರಾಜಕೀಯ ಜೀವನದಲ್ಲೇ ಇಂತಹ ಕೆಟ್ಟ ಆಡಳಿತ ನೋಡಿಲ್ಲ ಎಂದ ಅವರು, ಇಂತಹ ಜನರನ್ನು ಹಿಡಿದುಕೊಂಡು ಆಡಳಿತ ನಡೆಸೋಕೆ ಆಗಲ್ಲ. ಬಿಹಾರದ ಜನರು ಮೋದಿ ಅವರ ಅಭ್ಯುದಯಕ್ಕೆ ಮತ ಹಾಕಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಜನರ ಹಿತದ ಬಗ್ಗೆ ಕಾಳಜಿ ಇಲ್ಲ ಎಂದು ದೂಷಿಸಿದರು. ಕಾಂಗ್ರೆಸ್ ಬಗ್ಗೆ ಮಾತನಾಡುವುದು ಅಪ್ರಸ್ತುತವಾಗಿದೆ ಎಂದು ಟೀಕಿಸಿದ ಅವರು, ಖಜಾನೆ ಖಾಲಿಯಾಗಿದೆ. ಸಿದ್ದರಾಮಯ್ಯ ಬಳಿ ಏನೂ ಇಲ್ಲ. ಯಾವ ಕಡೆ ಏನು ಸಿಕ್ಕರೂ ಅದೇ ಕಡೆ ಹೋಗ್ತಿದೆ. ನಮ್ಮ ಸರ್ಕಾರದ ಕಾಲದಲ್ಲಿ 40% ಭ್ರಷ್ಟಾಚಾರ ಅಂತ ಹೇಳಿದ್ರು—ಇಂದು 100% ಕ್ಕೂ ಮೇಲು ನಡೆಸ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಹಿತ, ಅಭಿವೃದ್ಧಿ, ದಿಕ್ಕು—ಯಾವುದರ ಕುರಿತೂ ಕಾಂಗ್ರೆಸ್‌ಗೆ ಅರಿವಿಲ್ಲ ಎಂದು ವಾಗ್ದಾಳಿ ಮುಂದುವರಿಸಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅನ್ನೋದಕ್ಕೂ ನಾಚಿಕೆ. ದೆಹಲಿಗೆ ಹೋಗಿ ಇಲ್ಲದ ವೋಟ್ ಚೋರಿ ಬಗ್ಗೆ ಅಳುತ್ತಿದ್ದಾರೆ. ರಾಹುಲ್ ಗಾಂಧಿ ಯಾವ ವಿಚಾರಕ್ಕೆ ಹೋರಾಡಬೇಕು ಅನ್ನೋದನ್ನೇ ಮಾಡ್ತಿಲ್ಲ. ಅವರ ನಾಯಕತ್ವದಲ್ಲಿ ಒಂದು ಚುನಾವಣೆ ಸಹ ಗೆದ್ದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದದ್ದು ಬಿಜೆಪಿ ಒಳಗಿನ ತೊಂದರೆಗಳಿಂದಾಗಿ ಎಂದು ಹೇಳಿದ್ದಾರೆ. ಕಾಂಗ್ರೆಸ್ ಅವನತಿ ಈಗಿನಿಂದಲೇ ಶುರುವಾಗಿದೆ. ಹೈಕಮಾಂಡ್ ದಿನಾ ಕಪ್ಪ ಕಾಣಿಕೆ ತಗೆದುಕೊಂಡು ರಾಜ್ಯ ನಾಯಕರನ್ನು ನಿಯಂತ್ರಿಸಲು ವಿಫಲವಾಗುತ್ತಿದೆ. ಈ ಸರ್ಕಾರದಿಂದ ಅಭಿವೃದ್ಧಿ ನಿರೀಕ್ಷಿಸುವುದು ಕನಸು ಎಂದು ಹೇಳಿದರು.
ಮುಂದಿನ ಆರು ರಾಜ್ಯಗಳಲ್ಲಿ ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸೋಮಣ್ಣ, ತುಮಕೂರು, ಕೋಲಾರ, ರಾಮನಗರ ಸೇರಿದಂತೆ ಬೆಂಗಳೂರು ಗಡಿಭಾಗದ ಜಿಲ್ಲೆಗಳಿಗಾಗಿ ರೈಲ್ವೆ ಇಲಾಖೆ ಹಲವು ಯೋಜನೆಗಳನ್ನಾವಲಂಬಿಸಿದೆ ಎಂದರು. ತುಮಕೂರಿಗೆ ಮೆಟ್ರೋ, ನಾಲ್ಕು ಲೇನ್ ಹೈವೇ— ಡಿಪಿಆರ್ ಈಗಾಗಲೇ ಸಿದ್ಧವಾಗುತ್ತಿದೆ. ವಿಕಸಿತ ಭಾರತ 2047 ಗುರಿಯತ್ತ ವೇಗವಾಗಿ ಸಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

