₹8.3 ಕೋಟಿ ಸೈಬರ್ ವಂಚನೆ – ಫೇಕ್ ಆ್ಯಪ್‌ನ ಸೈಬರ್ ಜಾಲ

ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶ ದೊರೆಯುತ್ತದೆ ಎಂದು ನಂಬಿಸಿ ಸೈಬರ್ ವಂಚಕರು ಉದ್ಯಮಿಯೊಬ್ಬರಿಂದ ₹8.3 ಕೋಟಿ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ನಗರದ ದಕ್ಷಿಣ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉದ್ಯಮಿ ರಾಜೇಂದ್ರ ನಾಯ್ಡು ಅವರು ಈ ಸೈಬರ್ ವಂಚನೆಗೆ ಬಲಿಯಾಗಿದ್ದಾರೆ. ರಾಜೇಂದ್ರ ನಾಯ್ಡು ಅವರು ಅಯೋಧ್ಯೆಯ ರಾಮಮಂದಿರಕ್ಕೆ ಬೆಳ್ಳಿ ಪೂಜಾ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದ್ದವರು. ಈ ಹಿಂದೆ ರಿಲಯನ್ಸ್ ಕ್ಯಾಪಿಟಲ್‌ನಲ್ಲಿ ಸಾಲ ಪಡೆದು ಅದನ್ನು ಸಂಪೂರ್ಣವಾಗಿ ತೀರಿಸಿದ್ದ ಹಿನ್ನೆಲೆಯ ಮಾಹಿತಿ ಸೈಬರ್ ವಂಚಕರ ಕೈಗೆ ಬಿದ್ದಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಈ ಮಾಹಿತಿಯನ್ನು ಬಳಸಿಕೊಂಡ ವಂಚಕರು ರಾಜೇಂದ್ರ ನಾಯ್ಡು ಅವರಿಗೆ ಕರೆ ಮಾಡಿ, “ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದೆ” ಎಂದು ನಂಬಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ವಂಚಕರ ಮಾತು ನಂಬಿದ ರಾಜೇಂದ್ರ ನಾಯ್ಡು ಅವರು, ಸಾಮಾಜಿಕ ಕಾರ್ಯಗಳಿಗೆ ಉಪಯೋಗಿಸಲು ಲಾಭ ಗಳಿಸುವ ಉದ್ದೇಶದಿಂದ ಹೂಡಿಕೆ ಮಾಡಲು ಮುಂದಾದರು. ವಂಚಕರು ಸೂಚಿಸಿದಂತೆ ಫೋನ್‌ನಲ್ಲಿ ಒಂದು ಆ್ಯಪ್ ಇನ್‌ಸ್ಟಾಲ್ ಮಾಡಿದ್ದು, ಆರಂಭದಲ್ಲಿ ₹25 ಲಕ್ಷ ಹೂಡಿಕೆ ಮಾಡಿದ್ದರು. ನಂತರ ಹಂತಹಂತವಾಗಿ ಒಟ್ಟು ₹8.3 ಕೋಟಿ ಹಣವನ್ನು ಆ್ಯಪ್ ಮೂಲಕ ವರ್ಗಾಯಿಸಿದ್ದರು.

ಆ್ಯಪ್‌ನಲ್ಲಿ ಕೆಲವೇ ದಿನಗಳಲ್ಲಿ ₹59.4 ಕೋಟಿ ಲಾಭಾಂಶ ಬಂದಿರುವಂತೆ ತೋರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಲಾಭಾಂಶದಲ್ಲಿ ₹15 ಕೋಟಿ ವಾಪಸ್ ಪಡೆಯಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಿರಲಿಲ್ಲ. ಈ ವೇಳೆ ವಂಚಕರು, ಹಣ ಬಿಡುಗಡೆ ಮಾಡಲು ಶೇ.18ರಷ್ಟು ಸೇವಾ ಶುಲ್ಕವಾಗಿ ₹2.70 ಕೋಟಿ ಪಾವತಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದರಿಂದ ಅನುಮಾನಗೊಂಡ ರಾಜೇಂದ್ರ ನಾಯ್ಡು ಅವರು ತಕ್ಷಣವೇ 1930 ಸೈಬರ್ ಕ್ರೈಮ್ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ವಂಚಕರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author