ನವದೆಹಲಿ: ‘ಚೌಕಿದಾರ್ ಚೋರ್ ಹೈ ಅಂತ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ’ ಅಂತ ಹೇಳಿಕೆ ನೀಡಿ ನೋಟಿಸ್ ಪಡೆದಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉನ್ನತ ನ್ಯಾಯಾಲಯಕ್ಕೆ ಕ್ಷಮೆ ಕೋರಿದ್ದಾರೆ. ಮೂರು ಪುಟಗಳ ಅಫಿಡವಿಟ್ ಸಲ್ಲಿಸಿರೋ ರಾಹುಲ್ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಸುಪ್ರೀಂ ಕೋರ್ಟ್ನ ಆದೇಶವನ್ನು ತಪ್ಪಾಗಿ ವಿವರಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ. ಇದು ನಾನು ಉದ್ದೇಶಪೂರ್ವಕವಾಗಿ ನೀಡಿದ ಹೇಳಿಕೆಯಲ್ಲ ಅಂತ ರಾಹುಲ್ ಅಫಿಡವಿಟ್ನಲ್ಲಿ ಹೇಳಿದ್ದಾರೆ.
ರಫೇಲ್ ಹಗರಣ ಕುರಿತ ಆದೇಶ ಕುರಿತಂತೆ ಉತ್ತರಪ್ರದೇಶದ ಅಮೇಥಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಚೌಕಿದಾರ್ ಚೋರ್ ಹೈ ಅನ್ನೋದನ್ನ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ ಅಂತ ಹೇಳಿದ್ದರು. ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಹೇಳಿಕೆಯೆಂಬಂತೆ ಬಿಂಬಿಸಿದ್ದಾರೆ ಅಂತ ಬಿಜೆಪಿಯ ಮೀನಾಕ್ಷಿ ಲೇಖಿ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ರಾಹುಲ್ ಗಾಂಧಿ, ನಾನು ಈ ಹೇಳಿಕೆ ನೀಡಿದ್ದಕ್ಕೆ ವಿಷಾದಿಸುತ್ತೇನೆ ಅಂತ ಕೋರ್ಟ್ಗೆ ತಿಳಿಸಿದ್ದರು. ಆದ್ರೆ ಈ ಉತ್ತರ ತೃಪ್ತಿದಾಯಕವಾಗಿಲ್ಲ ಅಂತ ಕೋರ್ಟ್ ಮತ್ತೊಮ್ಮೆ ನೋಟಿಸ್ ನೀಡಿತ್ತು. ಈಗ ರಾಹುಲ್ 3 ಪುಟಗಳ ಅಫಿಡವಿಟ್ನಲ್ಲಿ ಬೇಷರತ್ ಕ್ಷಮೆ ಕೇಳಿದ್ದು, ಸುಪ್ರೀಂ ಕೋರ್ಟ್ ಇದನ್ನು ಸ್ವೀಕರಿಸಿದೆ.