Haveri News: ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಭವಾನಿ ಶಂಕರ ದೇವಾಲಯದ ಪುಷ್ಕರಣಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಪುಷ್ಕರಣಿ ಇರುವ ಜಾಗದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಪಾಲಿಕೆ ಬಿಜೆಪಿ ಸದಸ್ಯರು ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಆಯುಕ್ತರೊಂದಿಗೆ ಸದಸ್ಯರು ಮಾತಿನ ಚಕಮಕಿ ನಡೆಸಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಖ್ಯ ಕಚೇರಿಯಲ್ಲಿ ಹೈಡ್ರಾಮಾ. ಪುಷ್ಕರಣಿ ಉಳಿಸಿ ಎಂಬ ನಾಮಫಲಕ ಪ್ರದರ್ಶಿಸಿ ಪಾಲಿಕೆ ಬಿಜೆಪಿ ಸದಸ್ಯರು ಆಯುಕ್ತ ರುದ್ರೇಶ್ ಘಾಳಿ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಆಯುಕ್ತರ ವಿರುದ್ಧ ಘೋಷಣೆ ಕೂಗಿದ ಸದಸ್ಯರು, ಕಾಂಗ್ರೆಸ್ ಏಜೆಂಟ್ ರುದ್ರೇಶ್ ಘಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಚೇರಿಗೆ ಬಂದ ಆಯುಕ್ತ ರುದ್ರೇಶ್ ಘಾಳಿಯನ್ನು ಪ್ರತಿಭಟನಾ ನಿರತ ಸದಸ್ಯರು ಕಚೇರಿ ಪ್ರವೇಶಿಸದಂತೆ ತಡೆದರು. ರಸ್ತೆ ಕಾಮಗಾರಿ ಮಾಡಿರುವ ವಿಚಾರವಾಗಿ ಆಯುಕ್ತರು ಹಾಗೂ ಬಿಜೆಪಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ರಸ್ತೆ ಕಾಮಗಾರಿ ಮಾಡಿರುವುದನ್ನು ಆಯುಕ್ತರು ಸಮರ್ಥಿಸಿಕೊಂಡರು. ಪಾಲಿಕೆ ಸದಸ್ಯರ ಅನುದಾನದಲ್ಲಿ ಕಾಮಗಾರಿ ನಡೆಸಲಾಗಿದ್ದು, ಪಾಲಿಕೆ ಆಸ್ತಿಯಲ್ಲೇ ರಸ್ತೆ ನಿರ್ಮಿಸಲಾಗಿದೆ ಎಂದು ಹೇಳಿದರು. 2023ರಲ್ಲಿ ಪುರಾತತ್ವ ಇಲಾಖೆಯಿಂದ ಪಾಲಿಕೆಗೆ ಪತ್ರ ಬಂದಿದ್ದು, ಆ ಸ್ಥಳದಲ್ಲಿ ಪುಷ್ಕರಣಿ ಇರುವ ಬಗ್ಗೆ ಯಾವುದೇ ಕುರುಹುಗಳಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಆದರೆ ಪುಷ್ಕರಣಿ ಇರುವ ಬಗ್ಗೆ ಮತ್ತೊಮ್ಮೆ ಪುರಾತತ್ವ ಇಲಾಖೆಯಿಂದ ಸರ್ವೇ ನಡೆಸಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಸದಸ್ಯರ ಆಗ್ರಹಕ್ಕೆ ಸ್ಪಂದಿಸಿದ ಆಯುಕ್ತ ರುದ್ರೇಶ್ ಘಾಳಿ, ಮತ್ತೊಮ್ಮೆ ಸರ್ವೇ ನಡೆಸುವಂತೆ ಪುರಾತತ್ವ ಇಲಾಖೆಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ಇನ್ನು ಭವಾನಿ ಶಂಕರ ದೇವಾಲಯದ ಸುತ್ತಮುತ್ತ ಸಾಕಷ್ಟು ಮನೆಗಳಿದ್ದು, ಅಲ್ಲಿನ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಉದ್ದೇಶದಿಂದ ರಸ್ತೆ ಕಾಮಗಾರಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಪುರಾತತ್ವ ಇಲಾಖೆಯ ಯಾವುದೇ ನಿಯಮಗಳನ್ನು ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ ದೇವಸ್ಥಾನದ ಸುತ್ತಮುತ್ತ ಇರುವ ಮನೆಗಳನ್ನು ತೆರವುಗೊಳಿಸಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ. ಆದರೆ ಮನೆಗಳ ತೆರವು ಪಾಲಿಕೆಯಿಂದ ನೇರವಾಗಿ ಸಾಧ್ಯವಿಲ್ಲ. ಅದಕ್ಕಾಗಿ ಪ್ರತ್ಯೇಕ ಡಿಪಿಆರ್ ಸಿದ್ಧಪಡಿಸಿ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಪುಷ್ಕರಣಿ ವಿವಾದಕ್ಕೆ ಸಂಬಂಧಿಸಿದಂತೆ ಪಾಲಿಕೆ ಕಚೇರಿಯಲ್ಲಿ ಬಿಜೆಪಿ ಸದಸ್ಯರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಆಯುಕ್ತರ ಭರವಸೆ ಬಳಿಕ ಬಿಜೆಪಿ ಸದಸ್ಯರು ಪ್ರತಿಭಟನೆ ಕೈಬಿಟ್ಟಿದ್ದು, ಇದೀಗ ಪುರಾತತ್ವ ಇಲಾಖೆಯ ಮತ್ತೊಮ್ಮೆ ನಡೆಯಲಿರುವ ಸರ್ವೇ ಮೇಲೆ ಎಲ್ಲರ ಗಮನ ನೆಟ್ಟಿದೆ.
